ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮನೆಯ ಮೇಲೆ ಬಿದ್ದಿರುವ ಘಟನೆ ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್ ಎಂಬುವವರಿಗೆ ಸೇರಿದ ಮನೆಯ ಮೇಲೆ ಟ್ರ್ಯಾಕ್ಟರ್ ಬಿದ್ದಿದೆ. ಟ್ರ್ಯಾಕ್ಟರ್ ಚನ್ನಗಿರಿ ಮೂಲದ್ದಾಗಿದ್ದು, ಚಾಲಕ ಪರಾರಿಯಾಗಿದ್ದಾನೆ. ಮನೆಯ ಮೇಲೆ ಟ್ರ್ಯಾಕ್ಟರ್ ಬಿದ್ದ ಪರಿಣಾಮ ಮನೆಯ ಒಂದು ಭಾಗ ಕುಸಿದಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ವಿದ್ಯುತ್ ಉಪಕರಣಗಳು, ಗೃಹ ಉಪಯೋಗಿ ಪರಿಕರಗಳು ಹಾನಿಯಾಗಿವೆ. ಕಿರಣ್ ಅವರ ಪತ್ನಿಗೂ ಪೆಟ್ಟಾಗಿದ್ದು, ಸ್ಪೈನಲ್ಕಾರ್ಡ್ ಕ್ರಾಕ್ ಆಗಿದೆ ಎಂದು ಹೇಳಲಾಗಿದೆ. ಒಂದು ವರ್ಷದ ಮಗುವಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸ್ಟೇರಿಂಗ್ ಲಾಕ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್: ತಪ್ಪಿದ ಭಾರಿ ಅನಾಹುತ
ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್ಆರ್ಟಿಸಿ ಬಸ್ - ಮಂಡ್ಯ : ಕೆಎಸ್ಆರ್ಟಿಸಿ ಬಸ್ಸಿನ ಸ್ಟೇರಿಂಗ್ ಲಾಕ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಮಾ.3 ಸೋಮವಾರ ನಡೆದಿದೆ. ಮಂಡ್ಯದಿಂದ ಪಾಂಡವಪುರಕ್ಕೆ ತೆರಳುತ್ತಿದ್ದ ಬಸ್ ಕನಗನಮರಡಿ ಗೇಟ್ ಬಳಿ ತಲುಪುತ್ತಿದ್ದಂತೆ ಸ್ಟೇರಿಂಗ್ ಲಾಕ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ನುಗ್ಗಿತ್ತು. ಬಸ್ನಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿದ್ದಾಪುರ 16ನೇ ಮೈಲ್ ಕಲ್ಲಿನ ಬಳಿ ಬಸ್ ಪಲ್ಟಿ : 47 ಮಂದಿ ಪ್ರಾಣಾಪಾಯದಿಂದ ಪಾರು..
ಶಿರಸಿ: ಸ್ಟೇರಿಂಗ್ ಕಟ್ ಆಗಿ ಕರ್ನಾಟಕ ರಾಜ್ಯ ಸಾರಿಗೆ ಬಸ್ವೊಂದು ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ 16ನೇ ಮೈಲಿಕಲ್ ಬಳಿ ನಿನ್ನೆ ದಿನ ನಡೆದಿತ್ತು. ಹಳಿಯಾಳದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ 47 ಜನ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಒಂದೆರಡು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೊರತು ಪಡಿಸಿದರೇ ಉಳಿದೆಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.ಬಸ್ ಪಲ್ಟಿಯಾದ ತಕ್ಷಣ ಕಂದಕಕ್ಕೆ ಉರುಳಿ ಮರಕ್ಕೆ ಡಿಕ್ಕಿ ಹೊಡೆದಿರುವುದರಿಂದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದು, ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿತ್ತು.
ಮನೆಗೆ ನುಗ್ಗಿದ ಪಿಕಪ್ ವಾಹನ - ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಪಿಕಪ್ ವಾಹನ ರಸ್ತೆ ಬದಿಯಲ್ಲಿರುವ ಮನೆಗೆ ನುಗ್ಗಿರುವ ಘಟನೆ ಈ ಹಿಂದೆ ಬಂಟ್ವಾಳ ತಾಲೂಕಿನ ಮಣಿಹಳ್ಳದಲ್ಲಿ ನಡೆದಿತ್ತು. ಪುಂಜಾಲಕಟ್ಟೆಯಿಂದ ಬರುತ್ತಿದ್ದ ಕಾರು ಮೆಸ್ಕಾಂ ಇಲಾಖೆಗೆ ಸೇರಿದ ಪಿಕಪ್ ವಾಹನಕ್ಕೆ ಗುದ್ದಿತ್ತು. ಅಪಘಾತದಿಂದ ತಪ್ಪಿಸಲು ಪ್ರಯತ್ನಿಸಿದ ಚಾಲಕ ಪಿಕಪ್ ವಾಹನವನ್ನು ಮನೆಗೆ ಡಿಕ್ಕಿ ಹೊಡೆಸಿದ್ದ. ಮಣಿಹಳ್ಳ ನಿವಾಸಿ ಲಕ್ಷ್ಮಣ್ ಎಂಬುವವರಿಗೆ ಸೇರಿದ ಮನೆ ಇದಾಗಿತ್ತು.
ಇದನ್ನೂ ಓದಿ: ಬಂಟ್ವಾಳ: ಅಪಘಾತ ತಪ್ಪಿಸಲು ಹೋಗಿ ಮನೆಗೆ ನುಗ್ಗಿದ ಪಿಕಪ್ ವಾಹನ