ಚಿಕ್ಕಮಗಳೂರು : ನಗರದಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸುತ್ತಿರುವ ದತ್ತಮಾಲ ಉತ್ಸವದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮತ್ತು ಇತರ ಭಕ್ತಾಧಿಗಳು ನಗರದ ನಾರಾಯಣಪುರ ಬಡಾವಣೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ದತ್ತಮಾಲ ಉತ್ಸವವನ್ನು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ತುಂಬಾ ಅದ್ಧೂರಿಯಾಗಿ ಆಚರಿಸುತ್ತಿವೆ. ಈ ಹಿನ್ನೆಲೆ ನಗರದ ನಾರಾಯಣಪುರ ಬಡಾವಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಇತರ ಭಕ್ತಾದಿಗಳು ದತ್ತಾತ್ರೇಯ ಸ್ವಾಮಿಗೆ ಅಕ್ಕಿ, ಬೆಲ್ಲ, ಮತ್ತು ಕಾಯಿ ತುಂಬಾ ಪ್ರಿಯವಾದ ಆಹಾರವಾದ್ದರಿಂದ 10ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಭಿಕ್ಷೆ ಬೇಡುವುದರ ಮೂಲಕ ಪಡಿ ಸಂಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿ ಟಿ ರವಿ, ಪ್ರತಿ ವರ್ಷದಂತೆ ಈ ವರ್ಷವೂ ಸಂಪ್ರದಾಯದಂತೆ ಮಾಲೆ ಧರಿಸಿ ವ್ರತಾಚರಣೆಯಲ್ಲಿದ್ದೇವೆ. ಇವತ್ತು ಭಿಕ್ಷಾಟನೆ ನಡೆಸಿದ್ದೇವೆ. ಈ ವರ್ಷವೂ ಸಂಕಲ್ಪ ಹೊತ್ತಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆ ದೂರವಾಗಿದೆ.
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭಗವಂತ ಹೇಗೆ ದಾರಿ ತೋರಿಸಿದ್ದಾನೋ ಅದೇ ರೀತಿ ದತ್ತ ಪೀಠಕ್ಕೆ ಇರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ನ್ಯಾಯಾಲಯದಲ್ಲಿ ತೀರ್ಪು ಬರಲಿ, ಸತ್ಯದ ಪರ ತೀರ್ಪು ಬರಲಿ ಎಂದು ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ಇನ್ನು ಮನೆ ಮನೆಗೆ ತೆರಳಿ ಸಂಗ್ರಹಿಸಿದಂತಹ ಅಕ್ಕಿ, ಬೆಲ್ಲ, ಕಾಯಿಯ ಪಡಿಯನ್ನು ನಾಳೆ ದತ್ತ ಪೀಠದಲ್ಲಿ ಅಥವಾ ಚಂದ್ರ ದ್ರೋಣ ಪರ್ವತದಲ್ಲಿರುವಂತಹ ಸೀತಾಳಯ್ಯನಗಿರಿ, ಪಲಹಾರ ಮಠ, ನಿರ್ವಾಹಣ ಸ್ವಾಮಿ ಅಥವಾ ದತ್ತಪೀಠದ ಯಾವುದಾದರೂ ಮಠದಲ್ಲಿ ಇದರ ಪಡಿ ಸಲ್ಲಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಹಲವಾರು ಭಕ್ತಾದಿಗಳು ಭಾಗವಹಿಸಿ ಪಡಿ ಸಂಗ್ರಹಿಸಿದ್ದಲ್ಲದೇ ನಗರದ ಹಲವಾರು ಭಾಗಗಳಲ್ಲಿ ದತ್ತ ಮಾಲಾಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಸಂಪ್ರದಾಯ ರೂಢಿಯಲ್ಲಿದೆ. ನಾಳೆ ಹೊನ್ನಮ್ಮನ ಹಳ್ಳದಲ್ಲಿ ಸ್ನಾನವನ್ನು ಮಾಡಿ ಪಾದಯಾತ್ರೆಯ ಮೂಲಕ ದತ್ತ ಪೀಠದವರೆಗೂ ನಡೆದು ನಂತರ ಪಾದುಕೆಯ ದರ್ಶನವನ್ನು ಮಾಡಲಿದ್ದಾರೆ.
ಓದಿ: ನಿನ್ನೆ ದೇಶದಲ್ಲಿ 20 ಸಾವಿರ ಕೋವಿಡ್ ಕೇಸ್ ಪತ್ತೆ.. 279 ಮಂದಿ ಬಲಿ
ಇಂದು ಮಧ್ಯಾಹ್ನ ನಾಲ್ಕು ಗಂಟೆ ವೇಳೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ನಗರದಲ್ಲಿ ಬೃಹತ್ ಶೋಭಯಾತ್ರೆ ಜರುಗಲಿದೆ.
ಸಿದ್ದರಾಮಯ್ಯ ವಿರುದ್ದ ಆಕ್ರೋಶ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿ ಇವರೇ ನಿಮ್ಮ ತಂದೆ ಇವರೆ ಎಂದರೆ ನಂಬುತ್ತಾರೆ, ಯಾರೂ ಸಾಕ್ಷಿ ಕೇಳಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರುತ್ತಾರೆ. ಸಿದ್ದರಾಮಯ್ಯ ಅವರಿಗೆ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅದು ಅವರ ದೋಷ.
ಹನುಮ ಹುಟ್ಟಿದ್ದು ಗೊತ್ತಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದು, ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ದರೆ ಅದು ಅವರ ದೋಷ ಎಂದರು.
ನಂಬಿಕೆ ಎಲ್ಲವನ್ನೂ ಮೀರಿದ್ದು, ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು. ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣಲ್ಲ. ಅವರ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ, ಸಹವಾಸ ದೋಷದಿಂದ ಬಂದಿರೋದು.
ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರೋ ಕಾರಣಕ್ಕೆ ಅವರಿಗೆ ದೇವರ ಹೆಸರಿಟ್ಟರು. ಆದರೆ, ಅವರು ಸಹವಾಸ ದೋಷದಿಂದ ಕೆಟ್ಟಿದ್ದಾರೆ ಎಂದು ಹೇಳಿದರು.