ಚಿಕ್ಕಮಗಳೂರು : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇವತ್ತು ಚಿಕ್ಕಮಗಳೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ರು.
ಮೂಡಿಗೆರೆ ತಾಲೂಕಿನ ಮಲ್ಲಂದೂರು, ಕಣತಿ,ಆವತಿ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ್ರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದೆ. ಮೋದಿ ಭ್ರಷ್ಟಚಾರ ರಹಿತ ಆಡಳಿತ ನಡೆಸಿದ್ದು, ಅಧಿಕಾರಿಗಳು ಮತ್ತು ಸಂಸದರು ಒಂದು ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡಿದ್ದಾರೆ.
ಆಯುಷ್ಮಾನ್ ಯೋಜನೆಯಿಂದ ಸಾಕಷ್ಟು ಜನರಿಗೆ ಉಪಯೋಗವಾಗುತ್ತಿದ್ದು, ಈ ಹಿಂದೆ ಸಾಲ ಮಾಡಿ ಬಡವರು ಚಿಕಿತ್ಸೆ ಪಡೆಯಬೇಕಾಗಿತ್ತು. ಆದರೆ, ಈ ಯೋಜನೆಯಿಂದ ಕೇಂದ್ರ ಸರ್ಕಾರವೇ 5 ಲಕ್ಷ ಪಾವತಿ ಮಾಡುತ್ತಿದ್ದು, ಇದರಿಂದ ಜನರಿಗೆ ತುಂಬಾ ಅನುಕೂಲ ಆಗುತ್ತಿದೆ. ಈ ಭಾಗದಲ್ಲಿ ನಾನು 80 ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದೇನೆ, ಶೌಚಾಲಯ ನಿರ್ಮಾಣ, ಉಜ್ವಲ ಗ್ಯಾಸ್ ಸಿಲಿಂಡರ್ ಸೇರಿ ಹತ್ತಾರು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ ಎಂದರು.
ಇತ್ತ ಮೈತ್ರಿ ಅಭ್ಯರ್ಥಿಯಾದ ಪ್ರಮೋದ್ ಮಧ್ವರಾಜ್ ಅವರೂ ಸಹ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲೆಯ ತರೀಕೆರೆ ತಾಲೂಕು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪ್ರಚಾರ ಮಾಡುತ್ತಿದ್ದು, ಈ ಬಾರಿ ನನಗೆ ಮತ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.
ಈ ಹಿಂದೆ ಇದ್ದ ಶೋಭಾ ಕರಂದ್ಲಾಜೆ ಅವರು ಯಾವುದೇ ಅಭಿವೃದ್ದಿಯ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿಲ್ಲ. ನಿಮಗೆ ಕೈಗೆ ಸಿಗುವ ಸಂಸದ ಬೇಕಾ ಅಥವಾ ಚುನಾವಣೆ ಮುಗಿದ ನಂತರ ಕೈಗೇ ಸಿಗದ ಸಂಸದರು ಬೇಕಾ, ನೀವೇ ಯೋಚನೆ ಮಾಡಿ ಮತ ನೀಡಿ ಎಂದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಜನರಲ್ಲಿ ಮನವಿ ಮಾಡಿದ್ರು. ಮೋದಿ ಹೆಸರು ಹೇಳಿಕೊಂಡು ಯಾರಾದರೂ ಮತ ನೀಡಿದರೇ ಮೋದಿ ನಿಂತಿರುವ ಸ್ಥಳಕ್ಕೆ ಹೋಗಿ ಪ್ರಚಾರ ಮಾಡಿ ಎಂದು ಹೇಳಿ ಕಳುಹಿಸಿ ಎಂದರು.