ಚಿಕ್ಕಮಗಳೂರು : ನಗರದಲ್ಲಿ ಉನ್ನತ ಅಧಿಕಾರಿಯಿಂದ ಹಿಡಿದು ಕೆಳಹಂತದ ನೌಕರರು ಕೂಡ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಪ್ರಕರಣ ಸಂಬಂಧ ಉನ್ನತ ಅಧಿಕಾರಿ ಜೈಲು ಪಾಲಾಗಿದ್ದು, ಕೆಳಹಂತದ ನೌಕರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಭ್ರಷ್ಟಾಚಾರದ ಆರೋಪಕ್ಕೆ ಮತ್ತಷ್ಟು ತಿರುವು ಸಿಕ್ಕಂತಾಗಿದ್ದು, ಈ ಕುರಿತ ವರದಿ ಇಲ್ಲಿದೆ.
ತಹಶೀಲ್ದಾರರ ಮೇಲೆ ಒಂದಲ್ಲ-ಎರಡಲ್ಲ ಬರೋಬ್ಬರಿ ನೂರಾರು ಬೋಗಸ್ ಹಕ್ಕುಪತ್ರ ನೀಡಿರುವ ಗಂಭೀರ ಆರೋಪ ಇದೆ. ಹಕ್ಕುಪತ್ರದ ಭ್ರಷ್ಟಾಚಾರಲ್ಲಿ ಕೋಟ್ಯಂತರ ರೂಪಾಯಿಯ ಅಕ್ರಮ ಹಣದ ವಾಸನೆಯ ಆರೋಪವೂ ಬಲವಾಗಿದೆ. ಇದಕ್ಕೆ ಕೆಳಹಂತದ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಶೃಂಗೇರಿಯ ತಹಶೀಲ್ದಾರ್ ಅಂಬುಜಾ ಸೋಪ್ಪಿನಬೆಟ್ಟ ಅವರ ಗುಣಗಾನ ಈಗ ಎಲ್ಲಾ ಕಡೆ ಜೋರಾಗಿದೆ. ತಹಶೀಲ್ದಾರ್ಗೆ ಹಣ ನೀಡಿದ ಕೆಲವರು ಫೋನ್ ಮಾಡಿ ಅಧಿಕಾರಿಗಳಿಗೆ ಚಾರ್ಚ್ ಕೂಡ ಮಾಡಿದ್ದಾರೆ.
ತಹಶೀಲ್ದಾರ್ ಅಣತಿಯದಂತೆ ಹಕ್ಕುಪತ್ರ ನೀಡಲು ಗ್ರಾಮ ನಿರೀಕ್ಷಕ ಸಿದ್ದಪ್ಪ ಪ್ರವಾಸಿ ಮಂದಿರದಲ್ಲಿ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು. ಪ್ರಕರಣ ಸಂಬಂಧ ತಹಶೀಲ್ದಾರ್ ಅಂಬುಜಾ ಬಂಧನ ಕೂಡ ಆಗಿದೆ. ಇವರ ಕೃತ್ಯದಿಂದ ಹಣ ನೀಡಿದ ಹಳ್ಳಿಗರು ತಲೆಮೇಲೆ ಕೈ ಹಾಕಿ ಕೂತಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪತ್ನಿ ವಿನಿಮಯ ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ ವಿಡಿಯೋ ಮಾಡಿ ಶೇರ್ ಮಾಡೋ ಪತಿ!
ನಕಲಿ ಹಕ್ಕುಪತ್ರ ಹಗರಣ ದಿನಕ್ಕೊಂದು ತಿರುವು ಪಡೆದು ಬಂಧಿತರ ಸಂಖ್ಯೆ ಹೆಚ್ಚುತ್ತಿರುವಾಗಲೇ ತಹಶೀಲ್ದಾರ್ ಅಂಬುಜಾ ಡ್ರೈವರ್ ವಿಜೇತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಹೇಳಲಾಗಿದೆ. ಈಗಾಗಲೇ ತನಿಖಾ ತಂಡ ಶೃಂಗೇರಿಯಲ್ಲಿ ಬೀಡುಬಿಟ್ಟಿದ್ದು, ಪ್ರಕರಣ ಸಂಬಂಧ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ.
ನೂರಾರು ಅಕ್ರಮ ಹಕ್ಕು ಪತ್ರಗಳಲ್ಲಿ ಲಕ್ಷಾಂತರ ರೂಪಾಯಿ ಫ್ರಾಡ್ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ಬೋಗಸ್ ಹಕ್ಕುಪತ್ರ ಪಡೆದವರಲ್ಲೂ ಆತಂಕ ಹೆಚ್ಚಾಗಿದೆ. ಕೆಲವರು ಹಣವಾದ್ರೂ ವಾಪಸ್ ಬರುತ್ತಾ ಅಂತಾ ಚಾತಕಪಕ್ಷಿಗಳಂತೆ ಕಾಯ್ತಿದ್ದಾರೆ. ಈ ಕಾರಣಕ್ಕೆ ಶೃಂಗೇರಿ ಜನ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಕಂದಾಯ ಉಪವಿಭಾಗಾಧಿಕಾರಿ ನಾಗರಾಜ್ ಶೃಂಗೇರಿಯಲ್ಲೇ ಬೀಡು ಬಿಟ್ಟಿದ್ದು, ಸಮಗ್ರ ತನಿಖೆ ಕೈಗೊಂಡಿದ್ದಾರೆ.
ಒಂದು ಸೈಟ್ ಮಾಡಿಕೊಳ್ಳಬೇಕು, ಮನೆ ಕಟ್ಟಬೇಕು, ಜಮೀನು ಮಾಡಬೇಕು ಅಂತಾ ಪ್ರತಿಯೊಬ್ಬರಿಗೂ ಆಸೆ ಇರುತ್ತೆ. ಹಣ ಕೊಟ್ರೆ ಸಿಗುತ್ತೆ ಅಂದ್ರೆ ಹೆಂಡತಿ ತಾಳಿ ಮಾರಿಯಾದ್ರೂ ದುಡ್ಡು ತಂದು ಕೊಡ್ತಾರೆ. ಅದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಿಗಳು ಲಕ್ಷಾಂತರ ಹಣ ಪಡೆದು ಬೋಗಸ್ ಹಕ್ಕು ಪತ್ರ ನೀಡಿರೋದು ಮಾತ್ರ ಜನರನ್ನು ಬೀದಿಪಾಲಾಗುವಂತೆ ಮಾಡಿದೆ. ತನಿಖಾ ತಂಡ ಪ್ರಕರಣದ ಹಿಂದೆ ಬಿದ್ದಿದ್ದು, ಇನ್ನೆಷ್ಟು ಅಕ್ರಮ, ಯಾರ್ಯಾರು ರೋಡಿಗೆ ಬರ್ತಾರೋ ಕಾದು ನೋಡ್ಬೇಕು.