ಚಿಕ್ಕಮಗಳೂರು : ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆಯ ಮೇಲಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕಾಫೀ ಡೇ ಸಂಸ್ಥಾಪಕ ಕೊನೆಗೂ ಸತತ 36 ಗಂಟೆಗಳ ನಿರಂತರ ಕಾರ್ಯಚರಣೆ ಬಳಿಕ ಶವವಾಗಿ ಪತ್ತೆಯಾಗಿದ್ದರು. ನಂತರ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಪಾರ್ಥಿವ ಶರೀರ ತಂದು ತಾಯಿ ವಸಂತಿ ಹೆಗ್ಡೆ ಅವರ ಸಲಹೆ ಮೇರೆಗೆ ಚೇತನ ಹಳ್ಳಿಯಲ್ಲಿರುವ ಮನೆಯ ಪಕ್ಕದಲ್ಲಿಯೇ ಸಿದ್ದಾರ್ಥ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು.
ಇಂದೂ ಕೂಡ ಚೇತನ ಹಳ್ಳಿ ಎಸ್ವೇಟ್ನಲ್ಲಿ ನೀರವ ಮೌನ ಆವರಿಸಿದ್ದು, ತೋಟವೇ ನಿಶಬ್ದವಾಗಿದೆ. ಇಂದು ಬೆಳಗ್ಗೆ ಕುಟುಂಬದ ಸದಸ್ಯರಿಂದ ಅಂತಿಮ ವಿಧಿ ವಿಧಾನ ಕಾರ್ಯ ನಡೆದಿದ್ದು ಸಿದ್ದಾರ್ಥ ಅವರ ಸಮಾಧಿಗೆ ಹಾಲು - ತುಪ್ಪ ಬಿಡಲಾಯಿತು.
ಪುತ್ರರಾದ ಅಮರ್ತ್ಯ ಹಾಗೂ ಈಶಾನ್ ತಂದೆಯ ಸಮಾಧಿಗೆ ಹಾಲು ತುಪ್ಪ ಬಿಟ್ಟು ಒಂದು ಕುಡಿಕೆಯಲ್ಲಿ ತಂದೆಯ ಅಸ್ಥಿಯನ್ನು ಸಂಗ್ರಹ ಮಾಡಿದರು.
ಕುಟುಂಬ ಸದಸ್ಯರ ನಿರ್ಧಾರದ ಮೇಲೆ ಅಸ್ಥಿ ವಿಸರ್ಜನೆ ಮಾಡಲಿದ್ದು 5,9, ಅಥವಾ 11 ದಿನಕ್ಕೆ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ. ಸಿದ್ದಾರ್ಥ ಅವರ ಎಲ್ಲ ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ಮಾಡಲು ಕುಟುಂಬದ ಸದಸ್ಯರು ಚಿಂತನೆ ನಡೆಸಿದ್ದಾರೆ.