ಚಿಕ್ಕಮಗಳೂರು: ಎರಡು ವರ್ಷಗಳ ಹಿಂದೆಯೇ ನಮ್ಮ ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಹಾಗಾಗಿ ನಾನು ನಮ್ಮ ಕಾರ್ಯಕರ್ತರಿಗೆ ಅಲ್ಲಿಗೆ ಹೋಗಬೇಡಿ ಎಂದು ತಿಳಿ ಹೇಳಿರುವುದಾಗಿ ಐಎಂಎ ಜ್ಯುವೆಲ್ಸ್‌ನ ಬಹುಕೋಟಿ ವಂಚನೆ ಪ್ರಕರಣದ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೂ ಕೂಡ ಸುತ್ತಮುತ್ತಲಿನ ಸಾವಿರಾರೂ ಮುಸ್ಲಿಂರು ಅಲ್ಲಿಗೆ ಹೋಗಿ ಹಣ ಹೂಡಿಕೆ ಮಾಡಿದ್ದಾರೆ. 25 ಸಾವಿರ ಕೋಟಿ ಹಣ ದುರ್ಬಳಕೆ ಆಗಿದೆ ಎಂಬ ಮಾಹಿತಿ ದೊರೆತಿದೆ. ಕಂಪನಿ ಮಾಲೀಕ ಮನ್ಸೂರ್ ಖಾನ್ ಜೂತೆ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರ ಸಂಬಂಧ ಇದೆ ಎನ್ನಲಾಗುತ್ತಿದೆ. ರಾಜ್ಯದ ಬೇರೆ ಬೇರೆ ರಾಜಕಾರಣಿಗಳ ಸಂಬಂಧ ಸಹ ಇದೆ.
ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಜೊತೆ ನಂಟು ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ಜಮೀರ್ ಮತ್ತು ರೋಷನ್ ಬೇಗ್ ಅವರು ಪತ್ರಿಕಾಗೋಷ್ಠಿ ಮಾಡಿ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಮನ್ಸೂರ್ ಖಾನ್ ಅವರನ್ನು ಪತ್ತೆ ಮಾಡಬೇಕು. ಹಣ ಹೂಡಿಕೆ ಮಾಡಿದವರಿಗೆ ಹಣ ವಾಪಸ್ ಕೊಡಿಸಬೇಕು ಎಂದಿದ್ದಾರೆ.
ರಾಜ್ಯದ ಎಸ್ಐಟಿಯಿಂದ ಈ ತನಿಖೆ ಸಾಧ್ಯವಿಲ್ಲ. ನ್ಯಾಯ ಸಿಗಬೇಕೆಂದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕರಂದ್ಲಾಜೆ ಒತ್ತಾಯಿಸಿದರು.