ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸ್ತಮಾ ಕಾಯಿಲೆಗೆ ದಿನಾಂಕ 8 ಮತ್ತು 9 ರಂದು ಚಿಕಿತ್ಸೆ ಪಡೆದಿದ್ದ 52 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ, ಸರ್ಕಾರಿ ಆಸ್ಪತ್ರೆಯನ್ನು ಸ್ಯಾನಿಟೈಜ್ ಮಾಡಲಾಗಿದೆ.
ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಜುಲೈ 8 ಮತ್ತು 9 ರಂದು ಸೋಂಕಿತ ವ್ಯಕ್ತಿಯು ಅಸ್ತಮಾ ಕಾಯಿಲೆಗೆ ಚಿಕಿತ್ಸೆ ಪಡೆಯುವ ವೇಳೆ, ಆ ವ್ಯಕ್ತಿಯ ಗಂಟಲು ದ್ರವ ಹಾಗೂ ಮೂಗಿನ ದ್ರವದ ಪರೀಕ್ಷೆಯನ್ನು ಈ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ನಂತರ ಈ ವ್ಯಕ್ತಿಗೆ ಅಸ್ತಮಾ ಹೆಚ್ಚಾದ ಹಿನ್ನೆಲೆ, ಮಂಗಳೂರಿನ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ.
ಸದ್ಯ ಅಸ್ತಮಾವಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತನು ಸರ್ಕಾರಿ ವೈದ್ಯರ ಬಳಿ, ಪಟ್ಟಣ ಖಾಸಗಿ ವೈದ್ಯರ ಬಳಿ ಅಸ್ತಮಾ ಸಲುವಾಗಿ ಚಿಕಿತ್ಸೆ ಪಡೆದಿದ್ದಾರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ, ಖಾಸಗಿ ಲ್ಯಾಬ್ ನಲ್ಲಿ ಎಕ್ಸ್ ರೇ ಮಾಡಿಸಿದ್ದಾರೆ. ಸದ್ಯ ಸೋಂಕು ದೃಢಪಟ್ಟಿರುವ ಹಿನ್ನೆಲೆ ಸರ್ಕಾರಿ ಆಸ್ಪತ್ರೆಯನ್ನೇ ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಿ ಶುಚಿಗೊಳಿಸಲಾಗಿದೆ.