ಚಿಕ್ಕಮಗಳೂರು : ರಾಜ್ಯದಲ್ಲಿ ಕೋವಿಡ್ ಹೊಸ ರೂಪಾಂತರಿ ಜೆಎನ್-1 ಸಂಬಂಧ ಆತಂಕ ಪಡುವ ಅಗತ್ಯ ಇಲ್ಲ. ಹೊಸ ವರ್ಷ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಇನ್ನೂ ಗಂಭೀರವಾಗಿ ಹಬ್ಬಿಲ್ಲ. ಆದರೂ ಕೇಂದ್ರ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಅಗತ್ಯ ಕ್ರಮ ಕೈ ಗೊಳ್ಳಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೊಸವರ್ಷ ಆಚರಣೆ ಹಿನ್ನಲೆ ಸಭೆ ಕರೆದಿದ್ದೆವು. ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಸೇರಿ ಸಭೆ ನಡೆಸಿದೆವು. ಹೊಸ ವರ್ಷ ಆಚರಣೆ ಬಗ್ಗೆ ಸರ್ಕಾರದಿಂದ ಯಾವ ನಿರ್ದೇಶನಗಳನ್ನು ಮಾಡಿಲ್ಲ. ಕೋವಿಡ್ ಹಿನ್ನೆಲೆ ಮಾಸ್ಕ್ ಧರಿಸುವುದು, ಹೆಚ್ಚು ಜನ ಸಭೆ ಸೇರದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗುತ್ತದೆ ಎಂದು ಹೇಳಿದರು.
ಕೇರಳದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರಿ ತಳಿ ಬಗ್ಗೆ ಮಾತನಾಡಿದ ಪರಮೇಶ್ವರ್, ಕರ್ನಾಟಕದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಪ್ರಕರಣಗಳು ವರದಿಯಾದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತದೆ. ಅಲ್ಲಿಯವರೆಗೆ ಮಾಧ್ಯಮಗಳ ಸಹಕಾರ ಮುಖ್ಯ. ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೇಮಕಕ್ಕೆ ಯಾರಾದರೂ ಸಮಯ ನಿಗದಿ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು. ನಮ್ಮ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ. ಅವರು ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದರು.
ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ ಕುರಿತು ಮಾತನಾಡಿ, ಬೆಳಗಾವಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಏನೆಲ್ಲ ಕ್ರಮಕೈಗೊಳ್ಳಬೇಕೋ ಅದನ್ನು ತೆಗದುಕೊಂಡಿದೆ. ಆದರೆ ಬಿಜೆಪಿಯವರು ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜನರು ಕೂಡ ನಾವು ತೆಗೆದುಕೊಂಡ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೋರ್ಟ್ ಕೂಡ ನಮ್ಮ ಕ್ರಮಗಳನ್ನು ಪ್ರಶಂಸಿಸಿದೆ. ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿರುವ ಬಿಜೆಪಿಯವರು,ಇದರಲ್ಲಿ ಯಶಸ್ವಿ ಆಗುವುದಿಲ್ಲ ಎಂದು ಹೇಳಿದರು.
ಕೋವಿಡ್ ರೂಪಾಂತರಿ ಜೆಎನ್-1 ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ : ಕೋವಿಡ್ ರೂಪಾಂತರಿ ಜೆಎನ್-1 ದುರ್ಬಲ ವೈರಸ್ ಆಗಿದ್ದು, ಸಂಕ್ರಾಂತಿ ಬಳಿಕ ತಾನಾಗಿಯೇ ಮಾಯವಾಗಲಿದೆ. ಹಾಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಾ. ಆಂಜಿನಪ್ಪ ಹೇಳಿದರು
ಇದನ್ನೂ ಓದಿ : ಜೆಎನ್ -1 ಹೊಸ ತಳಿಯ ವೈರಸ್ ದುರ್ಬಲ, ಸಂಕ್ರಾಂತಿ ಬಳಿಕ ತಾನಾಗಿಯೇ ಮಾಯವಾಗಲಿದೆ; ಡಾ.ಆಂಜಿನಪ್ಪ