ಚಿಕ್ಕಮಗಳೂರು : ನಮ್ಮಂಥವರು ಚುನಾವಣೆ ಎದುರಿಸೋಕೆ ಕಷ್ಟ. ಕಳೆದ ಚುನಾವಣೆಯಲ್ಲಿ ನಾನು ಸಾಕಷ್ಟು ನೊಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ನನ್ನನ್ನ ಕಡೆಗಣಿಸಿದರು. ಮಹಿಳಾ ಕೋಟಾದಲ್ಲಿ ನನಗೆ ಸಚಿವ ಸ್ಥಾನ ನೀಡಬಹುದಿತ್ತು. ಸಿದ್ದರಾಮಯ್ಯ ಸಂತೆಯಲ್ಲಿ ಮೆಂತೆ ಕದ್ದವರೆಂದು ನನ್ನ ಆತ್ಮಕಥೆಯಲ್ಲಿ ಬರೆದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಸ್ಪಷ್ಟಪಡಿಸಿದರು.
ನಾನು ಇದುವರೆಗೆ ಎಂಟು ಚುನಾವಣೆಗಳನ್ನು ಎದುರಿಸಿದ್ದೇನೆ. ಆದರೆ, 2018ರಲ್ಲಿ ನಡೆದ ಚುನಾವಣೆಯನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಚುನಾವಣೆ ಎನ್ನುವುದು ನಮ್ಮ ಪಾಲಿಗೆ ದುಸ್ತರವಾಗಿದೆ, ಕಳೆದ ಬಾರಿಯ ಚುನಾವಣೆಯಲ್ಲೇ ನಾನು ಸಾಕಷ್ಟು ನೊಂದಿದ್ದೇನೆ. ಅಲ್ಲದೆ, ಚುನಾವಣೆ ವೆಚ್ಚ ಭರಿಸಲು ನನ್ನ ಮನೆಯನ್ನೇ ಭೋಗ್ಯಕ್ಕೆ ನೀಡಿ ನಾನು ಬಾಡಿಗೆ ಮನೆಯೊಂದರಲ್ಲಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದರು.
ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ನನ್ನ ವಿರೋಧವಿದೆ. ಮುಂದಿನ ದಿನಗಳಲ್ಲಿ ನನ್ನ ಮಗಳಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಲಾಗುವುದು. ಬಿಜೆಪಿಯವರ ಕೈ-ಬಾಯಿ ಸರಿ ಇಲ್ಲ ಎಂದು ಗೊತ್ತಾದ ಮೇಲೆ ಮತ್ತೆ ಅವರ ಸ್ನೇಹ ಬೆಳೆಸುವುದು ಸರಿಯಲ್ಲ. ಹಾಗಂತ ಅಲ್ಲಿ ಮೇವು ಸಿಗುತ್ತೆ ಅಂತ ನಮ್ಮ ಪಕ್ಷದವರೇ ಕೆಲವರು ಬಿಜೆಪಿ ಸೇರಿದ್ದಾರೆ. ಕುಮಾರಸ್ವಾಮಿಗೆ ಟಿಕೆಟ್ ಕೊಡುವ ಬದಲು ಕಾಂಗ್ರೆಸ್ನ ಬೂತ್ ಕಾರ್ಯಕರ್ತನಿಗೆ ನೀಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೈ ಕಾರ್ಯಕರ್ತರನ್ನು ಬಲವಂತವಾಗಿ ಎಳೆದೊಯ್ದ ಫೋಟೋಗಳು ವೈರಲ್: ಇದು 'ರಾಜಕೀಯ ಪ್ರೇರಿತ' ಎಂದ ಕಾಂಗ್ರೆಸ್