ಚಿಕ್ಕಮಗಳೂರು : ಅಂತೂ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರ ಪ್ರಾರಂಭವಾಗಿದೆ. ಜಿಲ್ಲಾ ಕೋವಿಡ್-19 ಆಸ್ಪತ್ರೆ ಆವರಣದಲ್ಲಿ ವಿಧಾನ ಪರಿಷತ್‌ನ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ನೂತನ ಕೊರೊನಾ ವೈರಸ್ ಪರೀಕ್ಷಾ ಕೇಂದ್ರ ಉದ್ಘಾಟನೆ ಮಾಡಿದ್ದು, ಪರೀಕ್ಷಾ ಕೇಂದ್ರ ಇಂದಿನಿಂದ ಕಾರ್ಯ ನಿರ್ವಹಿಸಲಿದೆ.
ಸುಮಾರು 1.48 ಕೋಟಿ ವೆಚ್ಚದಲ್ಲಿ ಈ ಪರೀಕ್ಷಾ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಮಿಷನರಿಗಳನ್ನು ಇಂಗ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಮಿಷನರಿಗಳಿಗೆ ಐದು ವರ್ಷದ ವಾರಂಟಿ ಇದೆ ಎಂದು ಸಚಿವ ಸಿ ಟಿ ರವಿ ತಿಳಿಸಿದರು.
ಇಷ್ಟು ದಿನಗಳ ಕಾಲ ಜಿಲ್ಲೆಯಲ್ಲಿ ಯಾರಿಗಾದ್ರೂ ಕೊರೊನಾ ಸೋಂಕು ಪರೀಕ್ಷೆ ಮಾಡಿಸಬೇಕೆಂದ್ರೆ ಹಾಸನ, ಶಿವಮೊಗ್ಗ, ಮೈಸೂರಿಗೆ ಕಳಿಸಿಕೊಡಬೇಕಾಗಿತ್ತು. ಅಲ್ಲಿಂದ ರಿಪೋರ್ಟ್ ಬರಲು ಒಂದು ವಾರದವರೆಗೂ ಸಮಯ ಬೇಕಾಗುತ್ತಿತ್ತು. ಆದರೆ, ಇನ್ಮುಂದೆ ಆ ರೀತಿ ಆಗುವುದಿಲ್ಲ. ಟೆಸ್ಟ್ ಮಾಡಿದ ಐದು ಗಂಟೆಯೊಳಗೆ ಫಲಿತಾಂಶ ಇಲ್ಲಿಯೇ ಪಡೆಯಬಹುದು. ಈ ಕೇಂದ್ರದಲ್ಲಿ ಒಂದು ದಿನಕ್ಕೆ ₹1000-1,200ರವರೆಗೂ ಪರೀಕ್ಷೆ ನಡೆಸಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದರು.