ಚಿಕ್ಕಮಗಳೂರು : ಅಡಕೆ ಮಲೆನಾಡಿಗರ ಬದುಕೇ ಸರಿ, ಅಡಕೆಯನ್ನ ನಂಬಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಅಡಿಕೆಗೆ ಬಾಧಿಸುತ್ತಿರೋ ಹಳದಿ ಎಲೆ ರೋಗದಿಂದ ಬೆಳೆಗಾರರು 4-5 ದಶಕಗಳಿಂದ ಕಂಗಾಲಾಗಿದ್ದರು. ಆದ್ರೀಗ, ಆ ಹಳದಿ ರೋಗದ ಜೊತೆ ಎಲೆ ಚುಕ್ಕಿ ರೋಗ ಬೆಳೆಗಾರರನ್ನ ಸಂಕಷ್ಟಕ್ಕೆ ದೂಡಿದೆ. ಹಳದಿ ಎಲೆ ರೋಗ ಮರಗಳನ್ನ ಎಂಟತ್ತು ವರ್ಷಗಳ ಬಾಧಿಸಿದರೆ, ಎಲೆ ಚುಕ್ಕಿ ರೋಗ ಬಂದರೆ ಅಡಕೆ ಮರಗಳು ಉಳಿಯುವುದು ಕಷ್ಟ.
ಶೃಂಗೇರಿ ತಾಲೂಕಿನ ಮಾತೋಳ್ಳಿ, ಕೆರೆಕಟ್ಟೆ, ಶಿರ್ಲು, ಮುಡಬ, ಗುಲಗುಂಜಿಮನೆ, ಕಾರ್ಕಿ, ಹೆಮ್ಮಿಗೆ, ಹಾದಿ ಸೇರಿದಂತೆ ತಾಲೂಕಿನ ಶೇಕಡಾ 80ರಷ್ಟು ಅಡಕೆ ತೋಟಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿವೆ. ಐದು ತರಹದ ಹುಳಗಳು ಅಡಕೆಯ ಹಸಿ ಸೋಗೆಯನ್ನ ತಿನ್ನುತ್ತಿವೆ. ಹುಳಗಳು ಸುಳಿಯನ್ನ ತಿಂದ ಮೇಲೆ ಗಿಡಗಳೇ ಸತ್ತು ಹೋಗುತ್ತಿವೆ.
ಗರಿಗಳ ಮೂಲಕ ಹರಡುವ ರೋಗ
ಗರಿಗಳ ಮೂಲಕ ಹರಡುತ್ತಿರೋ ಈ ರೋಗ, ಗರಿಗಳಲ್ಲಿ ತೆಳು ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪುಬಣ್ಣದ ಚುಕ್ಕಿಗಳು ಕಾಣಿಸುತ್ತಿವೆ. ಹಾಗಾಗಿ ಗರಿಗಳು ಕೆಂಪಾಗಿ, ಮರದ ಗಾತ್ರವೇ ಸಣ್ಣದಾಗಿ ಅಡಕೆ ಮರಗಳು ನಿಲ್ಲುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ.
15-20 ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಮರಗಳು ಈಗೀಗ ಫಸಲು ನೀಡಲು ಶುರುವಿಟ್ಟಿವೆ. ಆದರೀಗ, ಎಲೆ ಚುಕ್ಕಿ ರೋಗದಿಂದ ಎಲ್ಲ ಮರಗಳು ಒಣಗುತ್ತಿವೆ. ಕಳೆದೊಂದು ವರ್ಷದಿಂದ ಕ್ರಮೇಣ ತೋಟವೇ ನಾಶವಾಗುತ್ತಿದೆ. ಹೀಗಾದರೆ ನಾವು ಹೇಗೆ ಬದುಕೋದು ಹೇಗೆ, ಸಾವಿರಾರು ರೂಪಾಯಿ ಔಷಧ ಸಿಂಪಡಿಸಿ ಸಾಕಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.
ಕಾಳ್ಗಿಚ್ಚು ಹತೋಟಿಗೆ ಹುಳುಗಳ ಹಾವಳಿ ಹೆಚ್ಚಳ
ಈ ಹಿಂದೆ ಗುಡ್ಡಕ್ಕೆ ಬೆಂಕಿ ಬೀಳುವುದು ಮತ್ತು ಕಾಳ್ಗಿಚ್ಚು ಬೀಳುವುದರಿಂದ ಹುಳಗಳು ಬೆಂಕಿಗೆ ಬಿದ್ದು ಸಾಯುತ್ತಿದ್ದವಂತೆ. ಆದರೆ, ಕಳೆದ ಎರಡು ವರ್ಷದಿಂದ ಮಳೆ ಜಾಸ್ತಿಯಾಗಿ ಕಾಳ್ಗಿಚ್ಚು ಹತೋಟಿಗೆ ಬಂದ ಕಾರಣ ಹುಳಗಳ ಸಂತತಿ ಜಾಸ್ತಿಯಾಗಿದೆ. ಆದ್ದರಿಂದ ತೋಟಗಳ ಮೇಲೆ ಈ ರೋಗ ಪರಿಣಾಮ ಬೀರಿದ್ದು ದಶಕಗಳ ಅಡಕೆ ಮರಗಳು ನಾಲ್ಕೈದು ತಿಂಗಳಲ್ಲೇ ಸಾಯುತ್ತಿವೆ ಎಂದು ಸ್ಥಳಿಯರು ಅಭಿಪ್ರಾಯಪಟ್ಟಿದ್ದಾರೆ.
ಎಷ್ಟೇ ಔಷಧ ಕಂಡುಹಿಡಿದು ಕೀಟನಾಶಕವನ್ನ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬೇರು ಹುಳ ಬಾಧೆ, ಹಳದಿ ಎಲೆ ರೋಗ ಸೇರಿದಂತೆ ಇತರ ರೋಗಗಳು ಕಾಡಿದಾಗ ರೈತರು ಸವಲಾಗಿ ಸ್ವೀಕರಿಸಿ ತೋಟ ಉಳಿಸಿಕೊಂಡಿದ್ದರು. ಆದರೆ, ಎಲೆ ಚುಕ್ಕಿ ರೋಗ ತೋಟವನ್ನ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಬೆಳೆಗಾರರು ಕೈಚೆಲ್ಲಿ ಕೂತಿದ್ದಾರೆ.
ರೈತರ ಬದುಕು ಬರ್ಬಾದ ಮಾಡಿದ ರೋಗ
ಒಟ್ಟಾರೆಯಾಗಿ, ಶೃಂಗೇರಿ ತಾಲೂಕಿನಾದ್ಯಂತ ಎಲೆ ಚುಕ್ಕಿ ರೋಗ ರೈತರ ಬದುಕನ್ನೇ ಬರ್ಬಾದ್ ಮಾಡುತ್ತಿದೆ. ಆದರೆ ಇತ್ತ ಶೃಂಗೇರಿಯ ಅಡಕೆ ಸಂಶೋಧನ ಕೇಂದ್ರದ ವಿಜ್ಞಾನಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ. ಬೆಳೆಗಾರರು ತಮ್ಮ ಸಮಸ್ಯೆಯನ್ನ ಅಧಿಕಾರಿಗಳು, ವಿಜ್ಞಾನಿಗಳಿಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾರೊಬ್ಬರು ತೋಟಕ್ಕೆ ಬಂದು ರೋಗದ ಬಗ್ಗೆ ಮಾಹಿತಿಯನ್ನೂ ಪಡೆದಿಲ್ಲ ಎಂದು ಬೆಳೆಗಾರರು ಆಕ್ರೋಶ ಹೊರಹಾಕಿದ್ದಾರೆ.