ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂಡಿಗೆರೆ ತಾಲೂಕಿನ ಮಾಲಿಂಗ ನಾಡು ಗ್ರಾಮದಲ್ಲಿ ಕಟ್ಟಿಗೆ ಒಳಗೆ ಮಲಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ(King Cobra)ವನ್ನು ಸೆರೆಹಿಡಿಯಲಾಗಿದೆ.
ಗ್ರಾಮದ ಗಜೇಂದ್ರ ಹೆಬ್ಬಾರ್ ಮನೆಯ ಪಕ್ಕದಲ್ಲಿ ಜೋಡಿಸಿದ್ದ ಸೌದೆಗಳ ಅಡಿಯಲ್ಲಿ ಬರೋಬ್ಬರಿ 13 ಅಡಿ ಉದ್ದದ ಕಾಳಿಂಗ ಸರ್ಪ(King cobra) ಸುಳಿದಾಡುತ್ತಿರುವುದನ್ನು ನೋಡಿದ ಮನೆಯ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ಮನೆ ಯಜಮಾನರಿಗೆ ವಿಚಾರ ತಿಳಿಸಿದ್ದಾರೆ. ಗಜೇಂದ್ರ ಹೆಬ್ಬಾರ್ ಕೂಡಲೇ ಮೂಡಿಗೆರೆ ತಾಲೂಕಿನ ಉರುಗ ತಜ್ಞ ಆರಿಫ್ಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರಿಫ್ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಕಟ್ಟಿಗೆಗಳ ಮಧ್ಯೆ ಅವಿತು ಮಲಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾಳಿಂಗಸರ್ಪ ಹೊರಬರುತ್ತಿದ್ದಂತೆಯೇ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಅದರ ಗಾತ್ರ ನೋಡಿ ಹಿಂದೆ ಸರಿದಿದ್ದಾರೆ. ನಂತರ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಸ್ನೇಕ್ ಆರಿಫ್(snake Ariff) ಬಿಟ್ಟಿದ್ದಾರೆ. ಇವರು ಈವರೆಗೂ ನೂರಾರು ಕಾಳಿಂಗ ಸರ್ಪವನ್ನು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ಬಳ್ಳಾರಿ: ಹುಚ್ಚನ ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನರು ಭಾಗಿ, ಫೋಟೋ, ವಿಡಿಯೋ ವೈರಲ್