ಚಿಕ್ಕಮಗಳೂರು: ಒಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಯುವತಿಯೊಬ್ಬರು ಕಾಡಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿ ಗ್ರಾಮದ ಸುಮಾ ಮೃತಪಟ್ಟವರು. ಆಕೆಯ ಪತಿ ಅಭಿಷೇಕ್ ಬಂಧಿತ ಆರೋಪಿ. ವರ್ಷದ ಹಿಂದೆ ಒಂದೇ ಗ್ರಾಮದ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರೂ ಅಪ್ರಾಪ್ತರಾಗಿದ್ದ ಕಾರಣ ಮದುವೆಗೆ ಕಾನೂನು ಮಾನ್ಯತೆ ಇರಲಿಲ್ಲ. ಹೀಗಾಗಿ, ಮಗಳಿಗೆ 18 ವರ್ಷ ತುಂಬಿದ ಬಳಿಕ ನಿನ್ನ ಜೊತೆ ಕಳುಹಿಸುತ್ತೇವೆ ಅಂತಾ ಸುಮಾ ಪೋಷಕರು ಮಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದಾರೆ.
ಶುಕ್ರವಾರ ಸಂಜೆ ಸುಮಾಳ ಮನೆಗೆ ಬಂದು 'ಒಂದು ಕಾರ್ಯಕ್ರಮವಿದೆ. ನನ್ನ ಹೆಂಡತಿಯನ್ನ ಕರೆದುಕೊಂಡು ಹೋಗುತ್ತೇನೆ' ಅಂತ ಅಭಿಷೇಕ್ ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಕಾರ್ಯಕ್ರಮ ಮುಗಿಸಿ ಮನೆಗೆ ಬರುವಾಗ ಇಬ್ಬರು ಊರಂಚಿನ ಗುಡ್ಡಕ್ಕೆ ಹೋಗಿದ್ದಾರೆ. ಈ ಮಧ್ಯೆ ಸುಮಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸುಮಾಳನ್ನ ರಾತ್ರಿಯೇ ಕತ್ತು ಹಿಸುಕಿ ಪಾಪಿ ಗಂಡ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ರಾತ್ರಿಯಿಡಿ ಹೆಣದ ಜೊತೆಯೇ ಇದ್ದ ಅಭಿಷೇಕ್, ಆಕೆಯ ಮನೆಯವರಿಗೆ ಫೋನ್ ಮಾಡಿ, ವಿಚಾರ ಮುಟ್ಟಿಸಿ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದ.
ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸ್ವರ್ಣ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ