ಚಿಕ್ಕಮಗಳೂರು : ಲಾಕ್ಡೌನ್ ವೇಳೆ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಹಾಗೂ ರೈತರ ಮೇಲೆ ತುಂಬಾ ಅಡ್ಡ ಪರಿಣಾಮ ಬಿದ್ದಿದ್ದು, ಇವರೆಲ್ಲರೂ ಜೀವನ ಕಷ್ಟಕರವಾಗಿದೆ. ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಬರ ಪೀಡಿತ ಎಂಬ ಹಣೆಪಟ್ಟಿಯನ್ನು ಹೊಂದಿದ್ದು, ಈಗಾಗಲೇ ರೈತರು ಇದರಿಂದ ರೋಸಿ ಹೋಗಿದ್ದಾರೆ. ಲಾಕ್ಡೌನ್ನಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗಿದ್ದು, ಬೆಳೆದಂತಹ ಹಣ್ಣು-ತರಕಾರಿಗಳನ್ನು ಮಾರಾಟ ಮಾಡಲಾಗದೆ, ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತ ಅವರು, ಕಡೂರು ತಾಲೂಕಿನ ಸಿದ್ದರಹಳ್ಳಿ ಹಾಗೂ ಗೌಡನಕಟ್ಟೆ ಹಳ್ಳಿಗಳಿಗೆ ಭೇಟಿ ನೀಡಿ, ರೈತರ ಹೊಲ ಹಾಗೂ ಜಮೀನಿಗೆ ಭೇಟಿ ನೀಡಿ, ರೈತರು ಬೆಳೆದ ಹಣ್ಣು ಹಾಗೂ ತರಕಾರಿಗೆ ಬೆಲೆ ನಿಗದಿ ಮಾಡಿ ಖರೀದಿ ಮಾಡಿದರು.
ಸುಮಾರು 15 ಟನ್ ಕಲ್ಲಂಗಡಿ ಹಣ್ಣು, 15 ಟನ್ ಟೊಮೆಟೊ, 10 ಟನ್ ಈರುಳ್ಳಿ ಖರೀದಿ ಮಾಡಿದ್ದು, ಇದನ್ನು ನಾಳೆ ಕಡೂರು ಹಾಗೂ ಬೀರೂರಿನಲ್ಲಿ ಬಡವರಿಗೆ ಹಂಚಲಾಗುತ್ತದೆ. ಈ ರೀತಿ ಖುದ್ದಾಗಿ ರೈತರ ಹೊಲಗಳಿಗೆ ಭೇಟಿ, ನೀಡಿ ಹಣ್ಣು-ತರಕಾರಿ ಖರೀದಿ ಮಾಡುವುದರಿಂದ ದಲ್ಲಾಳಿಗಳ ಕಾಟ ತಪ್ಪಿದಂತಾಗಿದ್ದು, ಪೂರ್ಣ ಪ್ರಮಾಣದ ಹಣ ರೈತರಿಗೆ ಸಿಗಲಿದೆ. ಇದರಿಂದ ರೈತರಿಗೆ ಹಾಗೂ ಬಡವರಿಗೆ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ವೈ.ಎಸ್.ವಿ ದತ್ತಾ ಅವರು, ಖುದ್ದಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ, ಹಣ್ಣು-ತರಕಾರಿ ಖರೀದಿ ಮಾಡಿ ಅದನ್ನು ಬಡವರಿಗೆ ಹಂಚಲು ಯೋಜನೆ ರೂಪಿಸಿರುವುದಕ್ಕೆ ರೈತರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.