ಚಿಕ್ಕಮಗಳೂರು: ಇದು ನಮ್ ಜಮೀನು. ಇಲ್ಲಿ ನಾವು ಮನೆ ಕಟ್ತೀವಿ. ದಯವಿಟ್ಟು ಲೈನ್ ಎಳೀಬೇಡಿ. ನಮ್ಮನ್ನ ನಮ್ ಪಾಡಿಗೆ ಬದುಕಲು ಬಿಡಿ. ನಿಮ್ ಕಾಲಿಗೆ ಬೀಳ್ತೀವಿ. ಕೈ ಮುಗೀತೀವಿ. ದಮ್ಮಯ್ಯ ನಮ್ಗೆ ತೊಂದ್ರೆ ಕೊಡ್ಬೇಡಿ...
ಇದು ಜಮೀನಿನ ಮೇಲೆ ವಿದ್ಯುತ್ ಲೈನ್ ಎಳೆಯುತ್ತಿರುವ ಖಾಸಗಿ ಸೋಲಾರ್ ಕಂಪನಿ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಅಡ್ಡಿ ಪಡಿಸಿದ ಪೊಲೀಸರಿಗೆ ಅನ್ನದಾತರು ಅಂಗಲಾಚಿದ ಪರಿ.
ಈ ದೃಶ್ಯ ಕಂಡುಬಂದಿದ್ದು ಜಿಲ್ಲೆಯ ಕಡೂರು ತಾಲೂಕಿನ ತಿಮ್ಮಾಲಪುರ ಗ್ರಾಮದಲ್ಲಿ.ಒಬಿಜಿ ಎನರ್ಜಿ ಕಂಪನಿ ತನ್ನ ಸೋಲಾರ್ ಯೂನಿಟನ್ನು ತಿಮ್ಮಾಲಾಪುರದ ಗ್ರಾಮದಲ್ಲಿ ಸ್ಥಾಪಿಸಿದ್ದು, ಈ ಗ್ರಾಮದ ರೈತರ ಜಮೀನಿನ ಮೇಲೆ ವಿದ್ಯುತ್ ಲೈನ್ಗಳನ್ನು ಎಳೆದುಕೊಂಡು ಹೋಗಲಾಗುತ್ತಿದೆ. ರೈತರು ತಮ್ಮ ಜಮೀನಿನ ಮೇಲೆ ಲೈನ್ಗಳನ್ನು ಎಳೆಯದಂತೆ ಬೇಡಿಕೊಂಡರೂ ಕ್ಯಾರೇ ಎನ್ನದೆ ಕೆಲಸ ಮುಂದುವರೆಸಿದ್ದಾರೆ.
ಈ ಬಗ್ಗೆ ರೈತರು ಪ್ರತಿಭಟನೆಗೆ ಮುಂದಾಗಿದ್ದು, ತಮ್ಮ ಜಮೀನಿನ ಮೇಲೆ ಲೈನ್ ಎಳೆಯದಂತೆ ತಾಕೀತು ಮಾಡಿದ್ದಾರೆ. ಈ ಸಂದರ್ಭ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಜೊತೆಗೆ ಪ್ರತಿಭಟನಾ ನಿರತ ರೈತರನ್ನು ಒತ್ತಾಯವಾಗಿ ವಶಕ್ಕೆ ಪಡೆದಿದ್ದಾರೆ.
ರೈತರ ಮೇಲೆ ಪೊಲೀಸರ ದಬ್ಬಾಳಿಕೆ : ಗ್ರಾಮದ ಅನೇಕ ರೈತರು ಇಲ್ಲಿ ಮನೆ ಕಟ್ಟಲು ಮುಂದಾಗಿದ್ದು, ಇದೀಗ ಲೈನ್ ಹಾದು ಹೋಗಿರುವುದರಿಂದ ಮನೆ ಕಟ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನೊಂದ ರೈತರು ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ.ಈ ಖಾಸಗಿ ಕಂಪನಿಯವರು ಪೊಲೀಸರನ್ನು ಬಳಸಿಕೊಂಡು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಪೊಲೀಸ್ ರನ್ನು ನಿಯೋಜಿಸಲಾಗಿದೆ ಪೊಲೀಸ್ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ನನ್ನ ಮಗಳು ಇನ್ನೂ ನಾಲ್ಕು ದಿನ ನಮ್ಮೊಂದಿಗೆ ಜೀವಿಸಬೇಕು.. ಮಗಳ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ