ಚಿಕ್ಕಮಗಳೂರು : ನಗರದ ಬೇಲೂರು ಹೋಗುವ ರಸ್ತೆಯಲ್ಲಿರುವ ಬಾಲಕಿಯರ ವಸತಿ ಗೃಹದಲ್ಲಿ ಕ್ವಾರಂಟೈನ್ ಕೇಂದ್ರ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರದಲ್ಲಿನ ಅವ್ಯವಸ್ಥೆಯ ಕುರಿತು ಈಟಿವಿ ಭಾರತ್ ವರದಿ ಮಾಡಿತ್ತು.
ರಾತ್ರಿ ಸರಿಯಾಗಿ ಊಟ ನೀಡಿಲ್ಲ. ವಿಟಮಿನ್ ಸಿ ಹಾಗೂ ಜಿಂಕ್ ಮಾತ್ರೆಗಳನ್ನು ನೀಡಿದ್ದಾರೆ. ಊಟ ಮಾಡದೆ ಹೇಗೆ ಮಾತ್ರೆ ಸೇವಿಸುವುದು. ಬೆಳಗ್ಗೆ ಕಾಫಿ, ತಿಂಡಿ ಏನೂ ಕೊಟ್ಟಿಲ್ಲ. ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ. ಆರೋಗ್ಯ ತಪಾಸಣೆಯನ್ನೂ ಮಾಡುತ್ತಿಲ್ಲ. ಇಲ್ಲಿ ನಮ್ಮ ಬಗ್ಗೆ ಯಾರೂ ಕಾಳಜಿ ವಹಿಸುವವರು ಇಲ್ಲವೆಂದು ಸೋಂಕಿತರು ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ: ಕೋವಿಡ್ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಸಿಬ್ಬಂದಿ ವಿರುದ್ಧ ಸೋಂಕಿತರ ಆಕ್ರೋಶ
ಈ ಕುರಿತು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರತಿಕ್ರಿಯೆ ನೀಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಬೆಳಗ್ಗೆ 125 ತಿಂಡಿ ಪ್ಯಾಕೇಟ್ಗಳನ್ನು ಸರಬರಾಜು ಮಾಡಲಾಗಿತ್ತು. ಈ ಕೇಂದ್ರದಲ್ಲಿ 90 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ಎರಡೆರಡು ತಿಂಡಿ ಪ್ಯಾಕೇಟ್ಗಳನ್ನು ತೆಗೆದುಕೊಂಡಿರುವ ಹಿನ್ನೆಲೆ, ಕೆಲವರಿಗೆ ಬೆಳಗಿನ ಉಪಹಾರದಲ್ಲಿ ಸಮಸ್ಯೆ ಉಂಟಾಗಿದೆ.
ಅಲ್ಲಿನ ಸಮಸ್ಯೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಡಿಹೆಚ್ಒ ಅವರಿಗೆ ಸೂಚನೆ ನೀಡಲಾಗಿದೆ. ಅಲ್ಲಿನ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಲಾಗುವುದು ಎಂದರು. ಹಾಸ್ಟೆಲ್ ಮತ್ತು ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆ ಒಳಗೊಂಡಂತೆ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿನ್ನೆ ದಿನ ಜಿಲ್ಲೆಯಲ್ಲಿ 68 ಪ್ರಕರಣ ಕಾಣಿಸಿಕೊಂಡಿದ್ದು, ಒಟ್ಟು 402 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.
ಈಗಾಗಲೇ ಎಲ್ಲಾ ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕೆಲ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಈಟಿವಿ ಭಾರತ್ ಸುದ್ದಿ ಪ್ರಕಟ ಮಾಡಿದ ಬೆನ್ನಲ್ಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಭರವಸೆ ನೀಡಿದ್ದಾರೆ.