ಚಿಕ್ಕಮಗಳೂರು : ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಸಂಘಟನೆಗಳ ನೇತೃತ್ವದಲ್ಲಿ ಇಂದು ದತ್ತಮಾಲ ಉತ್ಸವ ಅದ್ಧೂರಿಯಾಗಿ ನಡೆಯಿತು. 10 ಸಾವಿರಕ್ಕೂ ಅಧಿಕ ದತ್ತ ಮಾಲಾಧಾರಿಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ, ದತ್ತಾತ್ರೇಯನ ಜಪ ಮಾಡುತ್ತಾ ಜೈಕಾರ ಕೂಗಿ ಡಿಜೆ ಹಾಡಿಗೆ ಹೆಜ್ಜೆ ಹಾಕಿದರು.
ನಗರದ ಕಾಮಧೇನು ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆ ಬಸವನಹಳ್ಳಿ ಮುಖ್ಯ ರಸ್ತೆ ಮತ್ತು ಎಂಜಿ ರಸ್ತೆಯ ಮೂಲಕ ಸಾಗಿ ಆಜಾದ್ ಪಾರ್ಕ್ ತಲುಪಿತು. ಈ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಬಾವುಟಗಳು ರಾರಾಜಿಸುತ್ತಿದ್ದವು. ದತ್ತಾಮಾಲಧಾರಿಗಳು ದತ್ತರಿಗೆ ಜೈಕಾರ ಕೂಗೂತ್ತಾ 'ದತ್ತಪೀಠ ಹಿಂದೂಗಳ ಪೀಠ' ಎಂದು ಘೋಷಣೆ ಮೊಳಗಿಸಿದರು.
ಶೋಭಯಾತ್ರೆಯಲ್ಲಿ 6ಕ್ಕೂ ಹೆಚ್ಚು ಕಲಾ ತಂಡಗಳು ಆಗಮಿಸಿ ರಸ್ತೆಯುದ್ದಕ್ಕೂ ಕಲಾ ಪ್ರದರ್ಶನ ಮಾಡಿದವು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಯಾತ್ರೆಯಲ್ಲಿ ಯುವಕರು ಹಾಗೂ ಯುವತಿಯರು ಜೈಶ್ರೀರಾಮ್, ಜೈಭಜರಂಗಿ ಹಾಡಿಗೆ ಹೆಜ್ಜೆ ಹಾಕಿದರು. ಶೋಭಾಯಾತ್ರೆಗೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ನಗರ ಕೇಸರಿ ಮಯವಾಗಿತ್ತು. ಯಾತ್ರೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಶಾಸಕ ಸಿಟಿ ರವಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದರು. ಅಲ್ಲದೇ ಯಾವುದೇ ರೀತಿಯ ಅಹಿತಕರ ಘಟನೆ ಜರುಗಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.