ಚಿಕ್ಕಮಗಳೂರು: ತಾಲೂಕಿನ ಅರೆಮಲೆನಾಡು ಭಾಗವಾದ ಲಕ್ಯಾ ಹೋಬಳಿಗೆ ನೀರುಣಿಸುವ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ದಿವಂಗತ ನಿಜಲಿಂಗಪ್ಪನವರು ದಾಸರಹಳ್ಳಿ ಏತನೀರಾವರಿ ಯೋಜನೆ ರೂಪಿಸಿದ್ದರು. ಚಂದ್ರದೋಣ ಪರ್ವತದಲ್ಲಿನ ಹೊನ್ನಮ್ಮನಹಳ್ಳದಿಂದ ದಾಸರಹಳ್ಳಿ ಕೆರೆಗೆ ನೀರು ತುಂಬಿಸಿ ಲಕ್ಯಾ ಹೋಬಳಿಗೆ ನೀರು ನೀಡುವ ಉದ್ದೇಶ ಈ ಯೋಜನೆಯದ್ದಾಗಿತ್ತು.
ದಾಸರಹಳ್ಳಿ ಕೆರೆ 273 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಮಳೆಗಾಲದಲ್ಲಿ ಹೊನ್ನಮ್ಮನ ಹಳ್ಳದಲ್ಲಿ ಪೋಲಾಗುವ ನೀರನ್ನು ಕೆರೆಗೆ ಹರಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಇದರಿಂದ ನೂರಾರು ಹಳ್ಳಿಗಳಿಗೆ ಕುಡಿವ ನೀರು ಸೇರಿದಂತೆ ಸಾವಿರಾರು ಏಕರೆ ರೈತರ ಜಮೀನಿಗೆ ನೀರು ಪೂರೈಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಜಿಲ್ಲೆಯ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿದೆ.
ಈ ಕೆರೆ ಕಳೆದ 40 ವರ್ಷದಲ್ಲಿ ಎರಡೂ ಬಾರಿ ಮಾತ್ರ ಕೋಡಿ ಬಿದ್ದಿದೆ. ಇಲ್ಲಿ ನೀರಿನ ತೊಂದರೆಯಿಂದ ಅಂತರ್ಜಲ ಮಟ್ಟವೂ ಇಳಿಮುಖವಾಗಿದೆ. 2005 ರಿಂದಲೂ ಬರಗಾಲಕ್ಕೆ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ಮಾತ್ರ ನೀರಿಗಾಗಿ ಯೋಚನೆ ಮಾಡಬೇಡಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಜನರು ನೀರಿಗಾಗಿ ಪರದಾಟ ಮಾಡೋದು ಮಾತ್ರ ನಿಂತಿಲ್ಲ. ಇನ್ನು ಈ ಯೋಜನೆಯನ್ನು 40 ವರ್ಷದ ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಕೈಗೆತ್ತಿಕೊಂಡಿತ್ತು. ಶಿವರಾಜ್ ತಂಗಡಗಿ ಸಣ್ಣ ನೀರಾವರಿ ಸಚಿವರಾಗಿದ್ದ ವೇಳೆ ಈ ಯೋಜನೆಗೆ 2 ಕೋಟಿ ಹಣ ಮೀಸಲಾಗಿಟ್ಟಿದ್ರು. ಅದೂ ಕೂಡ ಅಲ್ಲಿಗೇ ನಿಂತು ಹೋಗಿದ್ದು ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ.
ಕಳೆದ 40 ವರ್ಷಗಳಿಂದ ದಾಸರಹಳ್ಳಿ ಕೆರೆ ನೆನೆಗುದಿಗೆ ಬಿದ್ದಿದ್ದು,ಈ ಭಾಗದ ರೈತರು ಮಾತ್ರ ಇನ್ನು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇನ್ನದ್ರೂ ಸರ್ಕಾರ ಹಾಗೂ ಇಲ್ಲಿನ ಜನ ಪ್ರತಿನಿಧಿಗಳು ಈ ಕೆರೆಗೆ ನೀರು ತರುವುದರ ಮೂಲಕ ಸುತ್ತ ಮುತ್ತಲ ಹಳ್ಳಿಯ ಜನರ ನೀರಿನ ಬವಣೆಯನ್ನು ಈಡೇರಿಸಬೇಕಿದೆ.