ಮಂಗಳೂರು: ಹಿಜಾಬ್ ವಿವಾದ ವಿಚಾರದಿಂದ ಇಡೀ ದೇಶಕ್ಕೆ ಅವಮಾನವಾಗಿದೆ. ಕೇಸರಿ ಶಾಲು ಯಾಕೆ ಬಂದಿದೆ ಎಂಬುದು ನಮಗೆ ಗೊತ್ತಿದೆ. ನಾವು ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇಶ ಉಳಿಸಬೇಕೆಂಬುದು ನಮ್ಮ ಚಿಂತನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ವಿಚಾರವಾಗಿ ಮಂಗಳೂರಿಗೆ ಬಂದ ಅವರು, ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಕರಾವಳಿಯ ಜಿಲ್ಲೆಗಳು ತಮ್ಮದೇ ಆದ ಇತಿಹಾಸ ಹೊಂದಿವೆ. ಶಿಕ್ಷಣ, ವೈದ್ಯಕೀಯ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದೆ.
ಆದರೆ, ಇದೀಗ ಇಲ್ಲಿನ ಸಂಪನ್ಮೂಲಗಳನ್ನು ಸರಿಯಾಗಿ ಬಳಸದೇ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಿ, ಭಾವನೆಗಳನ್ನು ಕೆರಳಿಸಿ ಹಾಳುಗೆಡುವಲಾಗುತ್ತಿದೆ. ಇಲ್ಲಿನ ಸಂಪ್ರದಾಯ ಬದಲಾವಣೆ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ಗೆ ಸಂವಿಧಾನ, ರಾಷ್ಟ್ರಧ್ವಜವೇ ಧರ್ಮ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಾರನ್ನೂ ಜಾತಿ ಧರ್ಮದ ಆಧಾರದ ಮೇಲೆ ನೋಡಲು ಸಾಧ್ಯವಿಲ್ಲ ಎಂದರು.
ಅವರವರ ಧರ್ಮ, ಪದ್ಧತಿಯನ್ನು ಅನುಸರಿಸಲು ನಾವು ಅಡ್ಡಿಪಡಿಸೋಲ್ಲ. ಹೊಸ ಹೊಸ ಸಮಸ್ಯೆಗಳನ್ನು ಹುಟ್ಟಿಸುವ ಅಗತ್ಯವಿಲ್ಲ. ಹಿಜಾಬ್ ವಿವಾದದ ಬಗ್ಗೆ ಸಚಿವ ಸುನೀಲ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಯಾವ ಮಾತಿನೊಂದಿಗೆ ಸ್ವೀಕರಿಸಿದ್ದರೋ ಅದಕ್ಕೆ ಬದ್ಧ ರಾಗಲಿ. ಈ ಬಗ್ಗೆ ಕೋರ್ಟ್ ಏನು ಹೇಳುತ್ತದೋ ಅದಕ್ಕೆ ನಾವು ತಲೆ ಭಾಗುತ್ತೇವೆ ಎಂದು ಡಿ. ಕೆ ಶಿವಕುಮಾರ್ ಹೇಳಿದರು.
ಓದಿ: ಸರ್.. ಇವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಿ : ಸಿದ್ದರಾಮಯ್ಯಗೆ ವೈಎಸ್‌ವಿ ದತ್ತ ಬೆಂಬಲಿಗರ ಮನವಿ!