ಚಿಕ್ಕಮಗಳೂರು : ಆಸ್ತಿ ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ಕೋಪಗೊಂಡ ಮಗ, ತಂದೆ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲಿ ಸಮೀಪದ ಮಧುಗುಂಡಿ ಗ್ರಾಮದಲ್ಲಿ ನಿನ್ನೆ (ಆಗಸ್ಟ್ 13-2023) ನಡೆದಿದೆ.
ಪುತ್ರನೇ ತನ್ನ ತಂದೆ, ತಾಯಿ ಸೇರಿ ಮಧ್ಯವರ್ತಿಯ ಮೇಲೆ ಮಚ್ಚು ಬೀಸಿದ್ದಾನೆ. ಮೃತರನ್ನು ಭಾಸ್ಕರ್ ಗೌಡ (69), ಕಾರ್ತಿಕ್ (45) ಎಂದು ಗುರುತಿಸಲಾಗಿದೆ. ಮಹಿಳೆ ಪ್ರೇಮಾ (52) ಅವರ ಕುತ್ತಿಗೆಯ ಭಾಗಕ್ಕೆ ಬಲವಾದ ಮಚ್ಚಿನೇಟು ಬಿದ್ದಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆರೋಪಿ ಸಂತೋಷ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಘಟನೆಯ ವಿವರ : ಭಾಸ್ಕರ್ ಗೌಡ ಅವರಿಗೆ ಸುಮಾರು 15 ಎಕರೆ ಕಾಫಿ ತೋಟವಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಮಗ ಶಿವು ತೋಟ ಮಾರಬೇಕೆಂದೂ, ಕಿರಿಯ ಮಗ ಸಂತೋಷ್ ತೋಟ ಮಾರುವುದು ಬೇಡ ಎಂದು ವಾದಿಸಿದ್ದಾರೆ. ಆದರೆ, ಮಧ್ಯವರ್ತಿ ಕಾರ್ತಿಕ್ ಎಂಬವರ ಮೂಲಕ ತಂದೆ ಭಾಸ್ಕರ್ಗೌಡ ತೋಟವನ್ನು ಆಂಧ್ರಪ್ರದೇಶದ ವ್ಯಕ್ತಿಗೆ ಮಾರಾಟ ಮಾಡಿಸಿದ್ದರು. ತೋಟ ಖರೀದಿಸಿದ್ದ ವ್ಯಕ್ತಿ ಮುಂಗಡವಾಗಿ 12 ಲಕ್ಷ ರೂ ನೀಡಿದ್ದರು. ಆದರೆ, ಈ ಹಣವನ್ನು ಭಾಸ್ಕರ್ ಗೌಡರ ಹಿರಿಮಗ ಶಿವು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಿರಿಮಗ ಸಂತೋಷ್ ಕೋಪಗೊಂಡಿದ್ದಾರೆ. ಅಲ್ಲದೇ, ತೋಟ ಮಾರಿಸಿದ ಮಧ್ಯವರ್ತಿ ಕಾರ್ತಿಕ್ ಮನೆಗೆ ಬಂದಾಗ ಆತನ ಮೇಲೆಯೇ ಮಚ್ಚು ಬೀಸಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸಂತೋಷ್‌ನನ್ನು ತಡೆಯಲು ಬಂದ ಅಪ್ಪ ಹಾಗೂ ಅಮ್ಮನ ಮೇಲೂ ಮಗ ಮಚ್ಚು ಬೀಸಿದ್ದಾನೆ. ಈ ವೇಳೆ ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಪ್ಪ ಹಾಗೂ ಅಮ್ಮನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಭಾಸ್ಕರ್ ಗೌಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಾಯಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಕಾರ್ತಿಕ್ ಮಧುಗುಂಡಿ ಗ್ರಾಮದ ಉಪೇಂದ್ರ ಗೌಡ ಎಂಬವರ ಪುತ್ರ ಎಂದು ತಿಳಿದುಬಂದಿದೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಿಗೆ ಶರಣಾದ ಆರೋಪಿ ಸಂತೋಷ್, ಕಾರ್ತಿಕ್ ಮೇಲೆ ಆರೋಪ ಮಾಡಿದ್ದಾರೆ. ನನ್ನ ತಾಯಿಯ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ನಾನು ಆತನ ಮೇಲೆ ಹಲ್ಲೆ ಮಾಡಿದ್ದೇನೆ. ತಂದೆ-ತಾಯಿ ಬಿಡಿಸಲು ಬಂದರು. ಅವರಿಗೂ ಹಲ್ಲೆಯಾಯಿತು ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ಪ್ರತಿಕ್ರಿಯೆ: "ನಾನು ಡ್ಯೂಟಿ ಮುಗಿಸಿ ಮನೆಯಲ್ಲಿದ್ದೆ. ಬಾಳೂರು ಪೊಲೀಸ್ ಠಾಣೆಯಿಂದ ಫೋನ್ ಮಾಡಿ, ಸಂತೋಷ್ ಎಂಬ ವ್ಯಕ್ತಿ ಮೂರು ಜನರ ಹೆಲ್ಲೆ ಮಾಡಿದ್ದಾನೆ. ಅವರ ಮನೆಗೆ ಹೋಗ್ತೀರಾ? ಎಂದರು. ನಂತರ ನಾನು ದೂರ ಆಗುತ್ತೆ ಅಂದೆ. ನಂತರ ಸಿಬ್ಬಂದಿಯೊಂದಿಗೆ ಇಲ್ಲಿಗೆ ಬಂದಾಗ ಕಾರ್ತಿಕ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲು ಕರೆಕೊಂಡು ಹೋದ್ವಿ. ಅರ್ಧ ದಾರಿಯಲ್ಲಿ ಆಂಬ್ಯುಲೆನ್ಸ್ ಬಂತು. ಒಬ್ಬರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಇನ್ನೊಬ್ಬರು ಉಳಿದಿದ್ದಾರೆ" ಎಂದು ಸ್ಥಳಿಯರಾದ ಪೂವಪ್ಪ ಮಾಹಿತಿ ನೀಡಿದರು.
ಎಸ್ಪಿ ಪ್ರತಿಕ್ರಿಯೆ: ''ಆರೋಪಿ ಸಂತೋಷ್ ನಿನ್ನೆ ಪೊಲೀಸ್ ಠಾಣೆಗೆ ಬಂದು ಮೂರು ಜನರನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ನಮ್ಮ ಇಲಾಖೆಯವರು ಅವರ ಮನೆಗೆ ಹೋಗಿ ಪರಿಶೀಲನೆ ನಡೆಸಿದಾಗ ಅಲ್ಲಿ ಕಾರ್ತಿಕ್ ಎಂಬವರು ಮೃತಪಟ್ಟಿದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಮಂಗಳೂರಿನ ಎಜೆ ಹಾಸ್ಪಿಟಲ್ಗೆ ಕಳುಹಿಸಿಕೊಟ್ಟಿದ್ದೆವು. ಕೊನೆಗೆ ಆರೋಪಿಯನ್ನು ವಿಚಾರಣೆ ಮಾಡಿದಾಗ, ನನ್ನ ತಾಯಿಯ ಜೊತೆ ಕಾರ್ತಿಕ್ ಅಸಭ್ಯ ವರ್ತನೆ ಮಾಡಿದ್ದಾನೆ. ಹೀಗಾಗಿ, ನಾನು ಅಲ್ಲಿಯೇ ಇದ್ದ ದೊಣ್ಣೆಯಿಂದ ಹೊಡೆದೆ. ಅವನನ್ನು ಬಿಡಿಸಿಕೊಳ್ಳಲು ತಾಯಿ ಹಾಗು ತಂದೆ ಬಂದರು. ಹೀಗಾಗಿ ಅವರಿಗೂ ಹಲ್ಲೆಯಾಗಿದೆ ಎಂದು ಹೇಳಿದ್ದಾನೆ. ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ. ಪ್ರಕರಣ ದಾಖಲಿಸಿದ್ದೇವೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: Amruthahalli Murder: ಅಮೃತಹಳ್ಳಿ ಜೋಡಿ ಕೊಲೆ ಪ್ರಕರಣ: 30 ದಿನದಲ್ಲಿ ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಕೆ