ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ಐವರು ಯುವಕರು ನೀರುಪಾಲಾಗಿದ್ದರು. ಕೊನೆಗೂ ಐದೂ ಯುವಕರ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ.
ಕೆರೆಯಲ್ಲಿ ಈಜಲು ಹೋದ ಐದು ಯುವಕರು ಸಾವನ್ನಪ್ಪಿದ್ದು, ಚಿಕ್ಕಮಗಳೂರು ತಾಲೂಕಿನ ವಸ್ತಾರೆಯ ಹಿರೇಕೆರೆಯಲ್ಲಿ ಈ ಘಟನೆ ನಡೆದಿದೆ. ಈ ಐವರು ಯುವಕರಲ್ಲಿ ಇಬ್ಬರು ಸ್ಥಳೀಯ ನಿವಾಸಿಗಳಾಗಿದ್ದು, ಇನ್ನು ಮೂವರು ಯುವಕರು ಬೀಗರ ಊಟಕ್ಕೆ ಬಂದವರಾಗಿದ್ದಾರೆ. ರಘು (22), ದಿಲೀಪ್ (24), ಸಂದೀಪ್ (23), ದೀಪಕ್ (25), ಸುದೀಪ್ (22) ಕೆರೆಯಲ್ಲಿ ಈಜಲು ಹೋದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.
ಕೆರೆಯಲ್ಲಿ ಮುಳುಗಿದ ಯುವಕರಿಗಾಗಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವಾಟರ್ ಬೋಟ್ ಮೂಲಕ ಶೋಧ ಕಾರ್ಯ ಮಾಡಿ ಶವಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿ ಕೆರೆಯಲ್ಲಿ ಮುಳುಗಿದ್ದ ಯುವಕರ ಶವಗಳನ್ನು ಹೊರ ತೆಗೆದಿದ್ದಾರೆ. ಯುವಕರ ಮೃತದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕೆರೆಯಲ್ಲಿ ಈಜಲು ಹೋದ ಐವರು ಯುವಕರು ನೀರು ಪಾಲು:ತೀವ್ರ ಶೋಧ