ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಸಭೆಯಿಂದ ಹೊರ ನಡೆದರು.
ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿದ್ದು, ವಿಚಾರ ಮಂಡನೆಗೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಕೃಷಿ ಯಾಂತ್ರೀಕರಣ ಯೋಜನೆ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಹೊತ್ತು ಸಭೆಯಲ್ಲಿ ಗದ್ದಲ ಸೃಷ್ಟಿಯಾಗಿತ್ತು. ಸಭೆ ಪ್ರಾರಂಭವಾದ ಕೆಲ ಸಮಯದಲ್ಲಿಯೇ ಯಗಟಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಶರತ್ ಕೃಷ್ಣಮೂರ್ತಿ ಈ ಕುರಿತ ವಿಷಯ ಮಂಡನೆಗೆ ಎರಡು ಮೂರು ಬಾರಿ ಎದ್ದು ನಿಂತರೂ ಪ್ರಸ್ತಾಪಕ್ಕೆ ಅವಕಾಶವಾಗಲಿಲ್ಲ. ಈ ವೇಳೆ ಈ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಶರತ್ ಕೃಷ್ಣಮೂರ್ತಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಎಂದು ಲ್ಯಾಪ್‌ಟಾಪ್ ತೆಗೆದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಕರಣದ ತನಿಖೆಯನ್ನು ವಿಚಕ್ಷಣಾ ಸಮಿತಿಗೆ ನೀಡಿದ್ದಾರೆ. ಸಮಿತಿ ತನಿಖೆ ಮಾಡಿ ವರದಿ ನೀಡಬೇಕಿದೆ ಎಂದು ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಸೋಮಶೇಖರಪ್ಪ ತಿಳಿಸಿದರು. ಈ ವೇಳೆ ಶರತ್ ಏರು ಧ್ವನಿಯಲ್ಲಿ ಮಾತನಾಡಿದ್ದು, ಕೆಲ ಬಿಜೆಪಿ ಸದಸ್ಯರು ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಜೊತೆ ವಾಗ್ವಾದ ನಡೆಸಿದರು. ನಂತರ ಶರತ್ ಕೃಷ್ಣಮೂರ್ತಿ ಮತ್ತು ಇತರ ಕಾಂಗ್ರೆಸ್ ಸದಸ್ಯರು ವೇದಿಕೆ ಬಳಿಗೆ ಧಾವಿಸಿ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ದೂರಿ ಸಭೆಯಿಂದ ಹೊರ ನಡೆದರು.