ಚಿಕ್ಕಮಗಳೂರು/ಶಿವಮೊಗ್ಗ: ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದಿರುವ ಘಟನೆ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ನಲ್ಲಿ ನಡೆದಿದೆ. ಓವರ್ ಸ್ಪೀಡ್ನಿಂದ ಬಸ್ ಕಂಟ್ರೋಲ್ ತಪ್ಪಿದ್ದು, ಏಕಾಏಕಿ ಮಕ್ಕಳ ಮೇಲೆ ಹರಿದಿದೆ. ತುಳಸಿ (15) ಎನ್ನುವ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ತುಳಸಿಯನ್ನು ಮೊದಲು ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ.
ನಿವೇದಿತ (14) ಗಂಭೀರ ಗಾಯಗೊಂಡಿದ್ದು, ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಏಕಾಏಕಿ ರಸ್ತೆ ಬದಿಯ ಬಸ್ ನಿಲ್ದಾಣ ಹಾಗೂ ಮನೆಗಳತ್ತ ಬಸ್ ನುಗ್ಗಿದ್ದು, ಡಿಕ್ಕಿ ರಭಸಕ್ಕೆ ಮನೆಯ ಮುಂಭಾಗದ ಮೇಲ್ಛಾವಣಿ ಸಂಪೂರ್ಣ ಜಖಂ ಆಗಿದೆ. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿ ಆಗಿದ್ದಾರೆ. ಅಧಿಕ ವೇಗವಾಗಿ ಹೋಗುವ ಖಾಸಗಿ ಬಸ್ಗಳು ಹಾಗೂ ಚಾಲಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬಸ್ನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ಸಾವನ್ನಪ್ಪಿದ ವಿದ್ಯಾರ್ಥಿನಿ ತುಳಸಿ ಬಾವಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ತುಳಸಿ ತರೀಕೆರೆ ತಾಲೂಕಿನ ಸೀತಾಪುರ ಕಾವಲು ನಿವಾಸಿ ಆಗಿದ್ದು, ಮಂಜು ಲತಾ ದಂಪತಿಯ ಪುತ್ರಿ ಆಗಿದ್ದಾಳೆ. ತುಳಸಿ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಾಲಕಿ ತುಳಸಿ ಮೃತದೇಹವನ್ನು ಶಿವಮೊಗ್ಗ ಸರ್ಜಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತವಾಗಿದ್ದಂತೆ ಖಾಸಗಿ ಬಸ್ ಚಾಲಕ ರಾಮು ಪರಾರಿಯಾಗಿದ್ದಾನೆ. ಬಸ್ ಚಾಲಕನಿಗಾಗಿ ತರೀಕೆರೆ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಬಾಲಕಿ ತುಳಸಿಯ ಚಿಕ್ಕಪ್ಪ ವೀರಮಣಿ ಪರಿಹಾರಕ್ಕೆ ಆಗ್ರಹಿಸಿದ್ದು, ಶಾಸಕ ಜಿ ಎಸ್ ಶ್ರೀನಿವಾಸ್ ಅವರು ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಖಾಸಗಿ ಬಸ್ ಮಾಲೀಕ ಕೂಡ ಪರಿಹಾರ ಕೊಡಬೇಕು. ಈ ಕುರಿತು ನ್ಯಾಯಾಲಯದ ಮೂಲಕ ಹೋರಾಡಲು ಕೂಡ ಸಿದ್ಧ. ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ. ಬಸ್ ನಿಲ್ಲಿಸಿದ ಕೂಡಲೇ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ಕೊಡಬೇಕು ಎಂದಿದ್ದಾರೆ.
'ಐಎಎಸ್ ಆಗ್ತೇನೆ ಅಂತಿದ್ಲು, ಈಗ ಮಗಳೇ ಇಲ್ಲ': ಮೃತ ಬಾಲಕಿ ತುಳಸಿ ತಾಯಿ ಲಲಿತಾ ಮಾತನಾಡಿ, ಐಎಎಸ್ ಆಗ್ತೇನೆ ಅಂತಿದ್ಲು ಸಾರ್ ಆದರೆ, ಈಗ ಮಗಳೇ ಇಲ್ಲ ಎಂದು ಕಣ್ಣಿರಿಟ್ಟರು. ಬೆಳಗ್ಗೆ ಬಾಯ್ ಎಂದು ಹೇಳಿ ಹೋಗಿದ್ಲು, ಈಗ ಮಗಳು ಇಲ್ಲ. ನನ್ನ ಮಗಳು ನನಗೆ ಬೇಕು ಎನ್ನುವ ಆಕ್ರಂದನದ ದೃಶ್ಯ ನೆರೆದಿದ್ದವರ ಕಣ್ಣಲ್ಲಿ ಕಣ್ಣೀರು ತರಿಸಿತ್ತು.
ಶಿವಮೊಗ್ಗದಲ್ಲಿ ಪೋಸ್ಟ್ ಮಾರ್ಟಂ: ಮೃತಪಟ್ಟ ವಿದ್ಯಾರ್ಥಿ ತುಳಸಿ ಮೃತ ದೇಹ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಿಂದ ಶಿವಮೊಗ್ಗ ಜಿಲ್ಲಾ ಮೇಗ್ಗನ್ ಆಸ್ಪತ್ರೆಗೆ ರವಾನಿಸಿದ್ದು ಆಸ್ಪತ್ರೆಯ ಶವಾಗಾರದಲ್ಲಿ ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿಯ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು.