ಮೂಡಿಗೆರೆ(ಚಿಕ್ಕಮಗಳೂರು): ವಾರ್ಷಿಕ 150-200 ಇಂಚು ದಾಖಲೆ ಮಳೆ ಬೀಳುವ ಪ್ರದೇಶದಲ್ಲಿ, ಹವಾಮಾನ ವೈಪರಿತ್ಯದ ಮಧ್ಯೆಯೂ ಸಮೃದ್ಧ ಅಡಿಕೆ ಬೆಳೆದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ರೈತ ಅಸ್ಗರ್ ಅಹಮ್ಮದ್ ಸೈ ಎನ್ನಿಸಿಕೊಂಡಿದ್ದಾರೆ.
ಇವರಿಗೆ ಸುಮಾರು 60 ಎಕರೆ ಜಮೀನು ಇದ್ದು, ಅದರಲ್ಲಿ 12 ಎಕೆರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಖಾಲಿ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದ ಅಸ್ಗರ್ ಅವರು ಮಳೆ ಪ್ರದೇಶದಲ್ಲಿ ದಾಖಲೆ ಬೆಳೆ ಬೆಳೆದು ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಒಂದೊಂದು ಅಡಿಕೆ ಮರದಲ್ಲಿ 40 ರಿಂದ 50ಕೆಜಿವರೆಗೂ ಅಡಿಕೆ ಬರುತ್ತೆ ಅಂತಾರೆ ಅಸ್ಗರ್.
ವಾರ್ಷಿಕ 150-200 ಇಂಚು ಮಳೆ ಬೀಳುವ ಪ್ರದೇಶಗಳ ಭೂಮಿ ಶೀತವಾಗಿದ್ದು(ತಂಪಿನ ವಾತಾವರಣ), ಇಂತಹ ಪ್ರದೇಶದಲ್ಲೇ ನಾನಾ ತಳಿಯ ಅಡಿಕೆ ಬೆಳೆದಿದ್ದಾರೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಾಳದ ತೀರ್ಥಹಳ್ಳಿ, ಕೊಪ್ಪ, ಕಳಸ ಭಾಗದಲ್ಲಿ ಬೆಳೆಯುವಂತಹ ಎಲ್ಲಾ ಮಾದರಿಯ ಅಡಿಕೆಯನ್ನು ಅವರು ಇಲ್ಲಿ ಬೆಳೆದಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಮಲೆನಾಡಲ್ಲಿ ಸುರಿಯುತ್ತಿರುವ ದಾಖಲೆ ಮಳೆ ಹಲವು ರೀತಿಯಲ್ಲಿ ಹಾನಿ ಮಾಡಿತ್ತು. ಕೆಲ ಭಾಗದ ಅಡಿಕೆ, ಕಾಫಿ, ಮೆಣಸು ಸಂಪೂರ್ಣ ನಾಶವಾಗಿತ್ತು. ಅಸ್ಗರ್ ಅವರ ತೋಟದಲ್ಲೂ ಅಡಿಕೆ ನಾಶವಾಗಿತ್ತು. 2021ರಲ್ಲೂ ಭಾರಿ ಮಳೆಯಾಗಿತ್ತು. ಹವಾಮಾನ ವೈಪರಿತ್ಯದ ಮಧ್ಯೆಯೂ ಸಮೃದ್ಧ ಬೆಳೆ ಬೆಳೆದಿದ್ದೇನೆ. ಇದಕ್ಕೆ ತೋಟದ ಉತ್ತಮ ನಿರ್ವಹಣೆ ಕಾರಣ ಅಂತಾರೆ ಯಶಸ್ವಿ ರೈತ ಅಸ್ಗರ್ ಅಹಮ್ಮದ್.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಆಸ್ಪತ್ರೆಗೆ ದಾಖಲಾದ 55 ನಿಮಿಷದಲ್ಲೇ ಕೊರೊನಾ ಸೋಂಕಿತ ಪರಾರಿ!
ತಮ್ಮ ತೋಟದಲ್ಲಿ ಕಳೆನಾಶಕ ಬಳಸುವುದಿಲ್ಲ. ಬಹುತೇಕ ರೈತರು ವರ್ಷಕ್ಕೆ ಎರಡ್ಮೂರು ಬಾರಿ ತೋಟದಲ್ಲಿ ಕಳೆ ನಾಶಕ ಉಪಯೋಗಿಸುತ್ತಾರೆ. ಇದು ತೋಟದ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತೋಟದಲ್ಲಿ ಕಳೆನಾಕಶ ಬಳಸಬಾರದು. ಅದು ಕೇವಲ ರಸ್ತೆ ಬದಿಯ ಕಳೆನಾಶಕ್ಕೆ ಸೂಕ್ತ ಎಂದು ರೈತರಿಗೆ ಸಲಹೆ ನೀಡಿದ್ದಾರೆ.