ಚಿಕ್ಕಮಗಳೂರು : ಮಾನ ಇದ್ದವರು ಮಾನದ ಬಗ್ಗೆ ಯೋಚನೆ ಮಾಡುತ್ತಾರೆ. ಮಾನ ಇಲ್ಲದವರು ಏನು ಯೋಚನೆ ಮಾಡುತ್ತಾರೆ. ಮಾನನಷ್ಟ ಮೊಕದ್ದಮೆ ಹೂಡಲಿ. ಅಂತಹ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳೇ ಅವರಿಗೆ ತಿರುಗು ಬಾಣವಾಗುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ನಗರದ ದಂಟರ ಮಕ್ಕಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಸಿ ಟಿ ರವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ. ಡಿ ಕೆ ಶಿವಕುಮಾರ್ ಅವರಿಗೆ ಚಿಕ್ಕಮಗಳೂರಿನ ಬಗ್ಗೆ ಯಾವುದೇ ತಿಳುವಳಿಕೆ ಹಾಗೂ ಮಾಹಿತಿ ಇಲ್ಲ. ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ಧಿಯೇ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ನಮ್ಮ ಅಭಿವೃದ್ಧಿ ಹಾಗೂ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದರು.
ನೈತಿಕತೆ ಇದ್ದರೆ ಮತ ಕೇಳಲಿ- ಸಿಟಿ ರವಿ: ಕಾಂಗ್ರೆಸ್ಸಿಗರು ಏನೆಂದು ಕೇಳುತ್ತಾರೆ. ಕಾಂಗ್ರೆಸ್ಸಿಗರು ತಮ್ಮ ಆಡಳಿತದ ಆಳ್ವಿಕೆಯಲ್ಲಿ ಏನು ಮಾಡಿದ್ದಾರೆ ಎಂದು ಮತವನ್ನು ಕೇಳುತ್ತಾರೆ. ಕಾಂಗ್ರೆಸ್ಸಿಗರಿಗೆ ಇಲ್ಲಿ ಮತ ಕೇಳಲು ಮುಖವೇ ಇಲ್ಲ, ಮಾಡಿರುವ ಕೆಲಸವೂ ಇಲ್ಲ. ನಾನು ಕಾಂಗ್ರೆಸ್ಸಿಗರಿಗೆ ಸವಾಲು ಹಾಕುತ್ತೇನೆ. ಅವರು ತಮ್ಮ ಕಾಲದಲ್ಲಿ ಇಂತದ್ದು ಕೆಲಸ ಮಾಡಿದ್ದೇವೆಂದು ಹೇಳಲಿ, ನೈತಿಕತೆ ಇದ್ದರೆ ಮತ ಕೇಳಲಿ ಎಂದು ಹೇಳಿದರು.
ಇದನ್ನೂ ಓದಿ : ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡ್ತಿದೆ: ಹೆಚ್ ಡಿ ಕುಮಾರಸ್ವಾಮಿ
ಚಿಕ್ಕಮಗಳೂರಿನ ಜನರಿಗೆ ಸಿ ಟಿ ರವಿ ಏನೆಂದು ಗೊತ್ತು. ನಾನು ಈ ಮಣ್ಣಿನ ಮಗ. ಡಿ. ಕೆ ಶಿವಕುಮಾರ್ ಚಾಲೆಂಜ್ ಹಾಕಿರುವುದು ಚಿಕ್ಕಮಗಳೂರಿನ ಜನಕ್ಕೆ, ನನಗಲ್ಲ. ಜನ ಅವರ ಸವಾಲನ್ನು ಸ್ವೀಕರಿಸಿ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ. ಡಿ. ಕೆ ಶಿವಕುಮಾರ್ ಅವರಿಗಿರುವ ಆತಂಕವನ್ನು ಹೊರ ಹಾಕಿದ್ದಾರೆ. ದೇ ಆರ್ ಆಲ್ ಮೈ ಬ್ರದರ್ಸ್ ಅಂತ ಅವರೇ ಹೇಳಿದ್ದು. ನಾನಲ್ಲ. ಡಿಜೆ - ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರಿಗೆ ಬೆಂಬಲ ನೀಡಿದ್ದು ಯಾರು? ತಮ್ಮದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ನೀಡದೆ ರಾಜಕಾರಣ ಮಾಡಿದವರು ಯಾರು? ಎಂದು ಸಿ ಟಿ ರವಿ ಪ್ರಶ್ನಿಸಿದರು.
ಇದನ್ನೂ ಓದಿ : ಮೀಸಲಾತಿ ಪರಿಷ್ಕರಣೆ ಅಸಾಂವಿಧಾನಿಕ, ಕೂಡಲೇ ರಾಜ್ಯ ಸರ್ಕಾರ ವಜಾಗೊಳ್ಳಲಿ: ಸಿದ್ದರಾಮಯ್ಯ
ಡಿಕೆಶಿ ಸಿಎಂ ಆಗುವ ಪ್ರಶ್ನೆಯೇ ಇಲ್ಲ- ಸಿ ಟಿ ರವಿ : ಡಿಕೆಶಿ ಅವರು ಏನಾದರೂ ಮಾಡಿ ಸಿಎಂ ಆಗಬೇಕೆಂದು ಹೊರಟಿದ್ದಾರೆ. ನನ್ನ ಪ್ರಕಾರ, ಈ ಬಾರಿ ಅದು ಆಗಲ್ಲ. ಅವರು ಸಿಎಂ ಆಗೋಕೆ ಸಾಧ್ಯವೇ ಇಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆ ಹಾಗೂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಇಲ್ಲ ಎಂಬ ಭವಿಷ್ಯವನ್ನು ಶಾಸಕ ಸಿ ಟಿ ರವಿ ನುಡಿದಿದ್ದಾರೆ.
ಇದನ್ನೂ ಓದಿ : ಸಿ ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿಕೆಶಿ