ಚಿಕ್ಕಮಗಳೂರು: ತಮ್ಮದೇ ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಜಿಲ್ಲೆಯಲ್ಲಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದೇ ಸರ್ಕಾರದ ಆದೇಶವನ್ನು ಸರಿ-ತಪ್ಪು ಎಂದು ವ್ಯಾಖ್ಯಾನ ಮಾಡೋಕಾಗಲ್ಲ. ಒಮಿಕ್ರಾನ್ ಗೆ ಭಯ ಪಡಬೇಕಿಲ್ಲವೆಂದು ವಿಜ್ಞಾನಿಗಳೇ ಹೇಳಿದ್ದಾರೆ. ಮೂಗು ಇರುವವರಿಗೆ ನೆಗಡಿ ತಪ್ಪಲ್ಲ, ನೆಗಡಿ ಬಂದರೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಸರ್ಕಾರ ಕೂಡ ಜನರನ್ನ ಅನಗತ್ಯ ಭಯಕ್ಕೆ ಒಳಪಡಿಸಬಾರದು. ಸದ್ಯ ಜನಜೀವನ ಸಹಜ ಸ್ಥಿತಿಯಲ್ಲಿದೆ. ಆದ್ರೆ ಎಚ್ಚರವಹಿಸಬೇಕು ಎಂದು ಸರ್ಕಾರದ ನಿರ್ಣಯದ ವಿರುದ್ಧ ಶಾಸಕ ಸಿ.ಟಿ ರವಿ ಚಾಟಿ ಬೀಸಿದ್ದಾರೆ. ಅನಗತ್ಯ ಭಯ ಹುಟ್ಟಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.
ಸರ್ವಧರ್ಮ ಸಮನ್ವಯತೆ ಪಾಠ: ಅಲ್ಲಾ, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರೋದಿಲ್ಲ ಎಂದು ಸರ್ವಧರ್ಮ ಸಮನ್ವಯತೆಯ ಪಾಠವನ್ನು ಇವರು ಮಾಡಿದ್ದು, ಒಬ್ಬ ಹಿಂದೂವಾಗಿ ಜೀಸಸ್, ಅಲ್ಲಾನನ್ನ ದೇವರು ಎಂದು ಒಪ್ಪಿಕೊಳ್ಳಬಹುದು. ಹಿಂದೂವಾಗಿ ಚರ್ಚ್, ಮಸೀದಿಗೂ ಕೂಡ ಹೋಗಬಹುದು. ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವವಿದೆ. ಆದರೆ ಇಸ್ಲಾಂ ಆದ ತಕ್ಷಣ ಮಸೀದಿ ಹೊರತುಪಡಿಸಿ ದೇವಸ್ಥಾನದ ಬಾಗಿಲು ಬಂದ್ ಆಗುತ್ತೆ. ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿ ಉಳಿದ ದೇವರುಗಳ ಅಸ್ತಿತ್ವದ ಬಗ್ಗೆ ನಿರಾಕರಣೆ ಇದೆ ಎಂದರು.
ಈ ವಿಚಾರದಲ್ಲಿ ಎರಡು ಧರ್ಮಗಳು ಆಲೋಚನೆ ಮಾಡಿದರೆ ಉತ್ತಮ. ಎಷ್ಟು ಮತಿ ಇದೆಯೋ ಅಷ್ಟು ಮತ ಅನ್ನೋ ಮುಕ್ತತೆಗೆ ಅವಕಾಶ ಸಿಗುತ್ತೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸೋಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅಭಿಪ್ರಾಯಪಟ್ಟರು.
ಓದಿ: ನೈಟ್ ಕರ್ಫ್ಯೂನಲ್ಲಿ ಸುಖಾಸುಮ್ಮನೆ ಓಡಾಡಿದ್ರೆ ಪ್ರಕರಣ ದಾಖಲು : ಪೊಲೀಸ್ ಕಮಿಷನರ್ ಎಚ್ಚರಿಕೆ