ಚಿಕ್ಕಮಗಳೂರು: ಆಯುರ್ವೇದ ಚಿಕಿತ್ಸೆ ನೀಡುವ ಕ್ಲಿನಿಕ್ನಲ್ಲಿ ಅಲೋಪತಿ ಔಷಧಿ ಹಾಗೂ ಸ್ಟಿರಾಯ್ಡ್ಗಳು, ನಿಷೇಧಿತ ಔಷಧಿಗಳು ದಾಳಿ ವೇಳೆ ಪತ್ತೆಯಾಗಿವೆ ಎನ್ನಲಾಗಿದೆ.
ಕಡೂರು ತಾಲೂಕಿನಯಗಟಿಯ ಲಲಿತ ಆಯುರ್ವೇದಿಕ್ ಕ್ಲಿನಿಕ್ಗೆ ಬರುವ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಬದಲಾಗಿ ಇತರೆ ಚಿಕಿತ್ಸೆ ನೀಡುವುದು ಹಾಗೂ ಸ್ಟಿರಾಯ್ಡ್ ಬಳಸುತ್ತಿದ್ದರು ಎಂಬ ಮಾಹಿತಿ ಹಿನ್ನೆಲೆ ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್ ನೇತೃತ್ವದ ತಂಡ ದಾಳಿ ಮಾಡಿ, ಪರಿಶೀಲಿಸಿದೆ.
ಜಿಲ್ಲಾ ಖಾಸಗೀ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಸೂಚನೆಯ ಮೇರೆಗೆ ಈ ದಾಳಿ ನಡೆಸಲಾಗಿದೆ. ಹಿಂದೆಯೂ ಇದೇ ರೀತಿ ಕ್ಲಿನಿಕ್ ಮೇಲೆ ದೂರು ಕೇಳಿ ಬಂದಿತ್ತು. ಆಗ ಡಾ.ಮಂಜುನಾಥಗೆ ಎಚ್ಚರಿಕೆ ನೀಡಲಾಗಿತ್ತು. ಇಲ್ಲಿನ ಒಳರೋಗಿ ಹಾಗೂ ಹೊರ ರೋಗಿಗಳ ಯಾವುದೇ ರೀತಿಯ ದಾಖಲಾತಿಗಳು ಇಲ್ಲ ಎನ್ನಲಾಗಿದೆ.
ಅಲ್ಲದೇ ಕ್ಲಿನಿಕ್ನಲ್ಲಿ ಅಲೋಪತಿ ಹಾಗೂ ಸ್ವಿರಾಯ್ಡ್ಗೆ ಸಂಬಂಧಿಸಿದ ಹಲವಾರು ಔಷಧಿಗಳ ಸಂಗ್ರಹಣೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಈ ಕುರಿತು ಔಷಧಿ ನಿಯಂತ್ರಣ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಲ್ಲಿನ ಕೆಲ ಔಷಧಿ ಪಡೆದು ಕ್ಲಿನಿಕ್ ಹಾಗೂ ವೈದ್ಯನ ಮೇಲೆ ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಡಾ.ಹರೀಶ್ ಪತ್ರ ಬರೆದಿದ್ದಾರೆ.