ಚಿಕ್ಕಮಗಳೂರು: ವಕೀಲರೊಬ್ಬರ ಮೇಲೆ ಚಿಕ್ಕಮಗಳೂರು ನಗರ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಿಎಸ್‍ಐ, ಎಎಸ್ಐ. ಹೆಡ್ ಕಾನ್ಸಟೇಬಲ್ ಮತ್ತು ಮೂವರು ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅಮಾನತು ಮಾಡಿದ್ದಾರೆ
ಘಟನೆಗೆ ಸಂಬಧಿಸಿದಂತೆ ಎಸ್ಪಿ ವಿಕ್ರಂ ಅಮಟೆ ಮಾಹಿತಿ ನೀಡಿದ್ದು, "ನಿನ್ನೆ ದಿನ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ವಕೀಲ ಪ್ರೀತಂ ಎನ್ನುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಬಳಿಕ ಡಿವೈಎಸ್ಪಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರೀತಂ ಅವರ ಹೇಳಿಕೆ ಆಧಾರದ ಮೇಲೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಚಿಕ್ಕಮಗಳೂರು ಡಿವೈಎಸ್ಪಿಗೆ ವಹಿಸಲಾಗಿದೆ. ಸಿಬ್ಬಂದಿ ಮೇಲೆ ಕೇಳಿ ಬಂದಿರುವ ಆರೋಪದ ಮೇರೆಗೆ ಪಿಎಸ್‍ಐ, ಎಎಸ್ಐ, ಹೆಡ್ಕಾನ್ಸ್ಸ್ಟೇಬಲ್ ಮತ್ತು ಮೂವರು ಪೊಲೀಸ್ ಕಾನ್ಸ್ಸ್ಟೇಬಲ್ಗಳನ್ನು ಸದ್ಯ ಅಮಾನತು ಮಾಡಲಾಗಿದೆ. ಚಿಕ್ಕಮಗಳೂರು ವಕೀಲ್ ಸಂಘದವರ ಜೊತೆಗೆ ಮಾತನಾಡಲಾಗಿದ್ದು, ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ‘‘ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ಮಾಹಿತಿ ನೀಡಿದ್ದಾರೆ.
ವಕೀಲರ ಸಂಘದ ಆಕ್ರೋಶ: ಘಟನೆ ಬಳಿಕ ವಕೀಲರ ಸಂಘ ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ಹಲ್ಲೆ ನಡೆಸಿದವರನ್ನು ಅರೆಸ್ಟ್ ಮಾಡಬೇಕು ಎಂದು ಒತ್ತಾಯಿಸಿತ್ತು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಹೆಚ್ ಎಂ ಸುಧಾಕರ್ ಮಾತನಾಡಿ, "ಪ್ರೀತಂ ಮೇಲೆ ಚಿಕ್ಕಮಗಳೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ಪ್ರೀತಂ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೇ ಆರೋಪಿಗಳನ್ನು ಬಂಧಿಸದೇ ಇರುವುದು ಕಾನೂನಿನ ಉಲ್ಲಂಘನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬಂಧನಕ್ಕೆ ವಕೀಲರ ಆಗ್ರಹ: ಶುಕ್ರವಾರ ಪ್ರತಿಭಟನೆ ನಡೆಸಿ, ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಆರೋಪಿತ ಪೊಲೀಸರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ರಾಜ್ಯ ಹೈಕೋರ್ಟ್ ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದೆ ಎಂದರು. ಮಂಗಳವಾರ ಈ ಬಗ್ಗೆ ವರದಿ ನೀಡುವಂತೆ ಆದೇಶಿಸಿ, ವಿಚಾರಣೆ ಮುಂದೂಡಿದೆ ಎಂದ ವಿವೇಕ್ ರೆಡ್ಡಿ, ಇದೇ ವೇಳೆ ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಆಗ್ರಹಿಸಿದರು.
ಏನಿದು ಪ್ರಕರಣ?: ನಿನ್ನೆ ಸಂಜೆ 7 ಗಂಟೆ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಂ ಹೆಲ್ಮೆಟ್ ಹಾಕದೇ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸರು ಹಾಗೂ ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬೈಕ್ನ ಕೀ ತೆಗೆದ ವಿಚಾರಕ್ಕೆ ಈ ಮಾತಿನ ಚಕಮಕಿ ನಡೆದಿದೆ. ಠಾಣೆ ಎದುರೇ ಈ ಘಟನೆ ನಡೆದಿದ್ದರಿಂದ ಪೊಲೀಸರು ಆತನನ್ನ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆಂದು ವಕೀಲರ ಸಂಘ ಆರೋಪಿಸಿದೆ. ವಕೀಲ ಪ್ರೀತಂ ಎದೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಂಬಳ ಯಶಸ್ವಿ- ಜಾಗ ಸಿಕ್ಕರೆ ಮುಂದಿನ ವರ್ಷವು ನಡೆಸುತ್ತೇವೆ: ಶಾಸಕ ಅಶೋಕ್ ಕುಮಾರ್ ರೈ