ಚಿಕ್ಕಮಗಳೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಬ್ಬಿಗರಹಳ್ಳಿ- ದೇವಗೊಂಡನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ರೂ. 1.50 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಸಚಿವ ಸಿ.ಟಿ.ರವಿ ಭೂಮಿ ಪೂಜೆ ನೆರವೇರಿಸಿದರು.
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿನ ಪ್ರತೀ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ಅದರಂತೆ ಕೋವಿಡ್-19 ಆರ್ಥಿಕ ಸಂಕಷ್ಟದ ನಡುವೆಯೂ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರಸ್ತೆ, ಮನೆ, ಸೇತುವೆ ಒಳಗೊಂಡಂತೆ ಹಲವು ಅಭಿವೃದ್ಧಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಕಬ್ಬಿಗರಹಳ್ಳಿ ಗ್ರಾಮದ ಜನರ ಮನವಿಯಂತೆ ಈ ಭಾಗದ ರಸ್ತೆ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ರೂ. 1.50 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ಈವರೆಗೂ 5.50 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಸಿಂದಿಗೆರೆ ಮತ್ತು ಎಸ್. ಬಿದರೆ ಭಾಗದ ರಸ್ತೆ ನಿರ್ಮಾಣಕ್ಕೆ 2.75 ಕೋಟಿ, ಕರಡಿಗವೀಮ ಮಠ ಮತ್ತು ಸ್ವಾಮಿಕಟ್ಟೆ ಸಂಪರ್ಕ ರಸ್ತೆಗೆ 2.50 ಕೋಟಿ, ಕರಡಿಗವೀ ಮಠದಲ್ಲಿ ಯಾತ್ರಿ ನಿವಾಸಕ್ಕೆ 25 ಲಕ್ಷ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿ ಬೂಚೇನಹಳ್ಳಿ ಗ್ರಾಮಕ್ಕೆ 40 ಲಕ್ಷ, ಸಿಂದಿಗೆರೆಯಲ್ಲಿ ಬಾಕ್ಸ್ ಚರಂಡಿ ಒಳಗೊಂಡಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿನ ಬಹುತೇಕ ಗ್ರಾಮಗಳ ಕೇರಿಗಳಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿವೆ. ಭದ್ರಾ ಮೇಲ್ದಂಡೆಯಿಂದ ತರೀಕೆರೆ, ಕಡೂರು, ಚಿಕ್ಕಮಗಳೂರು ಭಾಗದ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ 1.291 ಕೋಟಿ ವೆಚ್ಚದ ಗೋಂದಿ ಯೋಜನೆಗೆ ಅನುಮೋದನೆ ದೊರೆತಿದ್ದು, 4 ಹಂತಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.