ಚಿಕ್ಕಬಳ್ಳಾಪುರ: ಅಕ್ಕಿ ಜೊತೆ ಗೋಧಿ ನೀಡದ ಹಿನ್ನೆಲೆ ಜನರು ನ್ಯಾಯಬೆಲೆ ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿಡ್ಲಘಟ್ಟ ತಾಲೂಕು ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಾಕ್ ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಗೋಧಿ ಹಾಗೂ ಅಕ್ಕಿ ವಿತರಣೆ ಮಾಡುದಾಗಿ ತಿಳಿಸಿದೆ. ಕಳೆದ ಎರಡು ದಿನಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನೂ ವಿತರಿಸಲಾಗುತ್ತಿದೆ. ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಮಾತ್ರ ಅಕ್ಕಿ ಜೊತೆ ಗೋಧಿ ವಿತರಣೆ ಮಾಡಲಾಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಜನರು ನ್ಯಾಯಬೆಲೆ ಅಂಗಡಿಗೆ ಬೀಗ ಜಡಿದು, ಗೋಧಿ ವಿತರಿಸುವಂತೆ ಆಗ್ರಹಿಸಿದ್ದಾರೆ.
ಕೋಚಿಮಿಲ್ ನಿರ್ದೇಶಕ ಆರ್ .ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಸರ್ಕಾರದಿಂದ ಗೋಧಿ ಬಂದ ನಂತರ ಪಡೆಯುವಂತೆ ಗ್ರಾಮಸ್ಥರನ್ನು ಮನವೊಲಿಸಿದ್ದಾರೆ.