ಚಿಕ್ಕಬಳ್ಳಾಪುರ: ಸರಿಯಾದ ತರಬೇತಿ ಇಲ್ಲದೆ ಅಗ್ನಿಪಥ ಯೋಜನೆಯ ಮೂಲಕ ಸೇನೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವುದು ದುರಂತ. ಯುವಕರನ್ನು ದಾರಿ ತಪ್ಪಿಸಲು ಈ ಯೋಜನೆ ಜಾರಿಗೆ ತಂದಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಆರ್ಎಸ್ಎಸ್ ಮತ್ತು ಸಂಘ ಪರಿವಾರದವರನ್ನು ಸೇರಿಸಿಕೊಳ್ಳುವ ಪ್ರಯತ್ನ ಮಾಡಿದರು. ಈಗ ಅಗ್ನಿಪಥ ಮೂಲಕ ಆರ್‌ಎಸ್‌ಎಸ್‌ನವರನ್ನು ವಾಮಮಾರ್ಗದಲ್ಲಿ ಮಿಲಿಟರಿಗೆ ಸೇರಿಸುವ ಕುತಂತ್ರ ನಡೆಯುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿ, ಹದಿನೇಳುವರೆ ವರ್ಷದ ಯುವಕರನ್ನು ಆಯ್ಕೆ ಮಾಡಿಕೊಂಡು, ಇಪ್ಪತ್ತೊಂದು ವರ್ಷಕ್ಕೆ ನಿವೃತ್ತಿ ಮಾಡ್ತಾರಂತೆ. ಈ ದೇಶದ ಮಿಲಟರಿ ವ್ಯವಸ್ಥೆ ಬಗ್ಗೆ ಅರಿತುಕೊಳ್ಳುವಷ್ಟರಲ್ಲಿ ಡಿಸ್ಚಾರ್ಜ್ ಮಾಡಿ ಹೊರಕಳಿಸ್ತಾರೆ. ಯುವಕರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮೋದಿ ಕೈ ಹಾಕಿದ್ದಾರೆ ಎಂದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳಿದ್ರು, ಮಾಡ್ಲಿಲ್ಲ. ಇವತ್ತು ಮೋದಿಯ ನಿಜ ಸ್ವರೂಪವನ್ನು ಯುವಕರು ಅರ್ಥ ಮಾಡಿಕೊಂಡಿದ್ದಾರೆ. ಸರಿಯಾದ ರೀತಿಯಲ್ಲಿ ಮಿಲಿಟರಿ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಈ ದೇಶದ ಸೈನ್ಯದ ಪಾವಿತ್ರ್ಯತೆ ಕಾಪಾಡಬೇಕು. ಫುಲ್ ಟೈಮ್ ಮಿಲಟರಿ ತರಬೇತಿಯವರನ್ನು ಬಿಟ್ಟು ಪಾರ್ಟ್ ಟೈಮ್ ಮಿಲಟರಿಯವರಿಗೆ ಅವಕಾಶ ಕೊಡ್ತಾ ಇದಾರೆ, ಇವರು ಯಾರೂ ದೇಶಕ್ಕೆ ಪ್ರಾಣ ಕೊಡುವ ಸೈನಿಕರಲ್ಲ ಎಂದು ದೂರಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಓರ್ವನ ಕೊಲೆ, ಹತ್ತಾರು ವಾಹನಗಳಿಗೆ ಬೆಂಕಿ