ಗುಡಿಬಂಡೆ: ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಟತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ಬೃಂದಾರೆಡ್ಡಿ(7) ಎಂದು ತಿಳಿದುಬಂದಿದ್ದು, ಗುಡಿಬಂಡೆ ಪಟ್ಟಣದ ಶಾಲೆಯೊಂದರಲ್ಲಿ 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ತನ್ನ ತಂದೆ ರಾಜಾರೆಡ್ಡಿ ಜೊತೆ ಬೆಳಿಗ್ಗೆ ತೋಟದ ಕಡೆಗೆ ಹೋಗಿದ್ದು, ತನ್ನ ತಂದೆ ಕೆಲಸ ಮಾಡುತ್ತಿದ್ದಾಗ ಬೃಂದಾರೆಡ್ಡಿ ಮತ್ತು ತಮ್ಮ ಅಭಿನವ್ ಆಟ ಆಡುತ್ತಾ ಕೃಷಿ ಹೊಂಡದ ಕಡೆಗೆ ಹೋಗಿದ್ದಾರೆ. ಬೃಂದಾ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ.
ಅಕ್ಕ ಬಿದ್ದ ಕೂಡಲೇ ಅಭಿನವ್ ತನ್ನ ತಂದೆ ರಾಜಾರೆಡ್ಡಿಯನ್ನು ಕರೆದುಕೊಂಡು ಬರುವಷ್ಟರಲ್ಲಿ ಬೃಂದಾ ಹೊಟ್ಟೆ ತುಂಬಾ ನೀರು ಕುಡಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಕೂಡಲೇ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಗ್ರಾಮಸ್ಥರು ತಿಳಿಸಿದ್ದಾರೆ.