ಚಿಕ್ಕಬಳ್ಳಾಪುರ : ಜೀವನದಲ್ಲಿ ಜಿಗುಪ್ಸೆಗೊಂಡ ವಿದ್ಯಾರ್ಥಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚೇಳೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಚೇಳೂರು ಗ್ರಾಮದ ಕೆಳಗಿನ ಬೀದಿ ನಿವಾಸಿ ಎಸ್.ನಿತಿನ್ ಬಿನ್ ಶಂಕರ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಬೆಂಗಳೂರು ನಗರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆ ನಡೆದ ಮೂರು ದಿನದ ಹಿಂದೆ ತನ್ನ ಊರಿಗೆ ಬಂದಿದ್ದ ಈತ ಮನೆಯಲ್ಲೇ ಇದ್ದನು. ಬಳಿಕ ಶುಕ್ರವಾರ ದಿನ ಮಧ್ಯಾಹ್ನದ ವೇಳೆ ಗ್ರಾಮದ ಪಾಪಾಗ್ನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಬಳಿಕ ನಾಪತ್ತೆಯಾದ ಯುವಕನ ಪತ್ತೆಗೆ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದು, ಈ ವೇಳೆ ನದಿಯ ದಡದಲ್ಲಿ ಯುವಕನ ಚಪ್ಪಲಿ ಪತ್ತೆಯಾಗಿದೆ. ನಂತರ ಈಜುಗಾರರ ಸಹಾಯದಿಂದ ನದಿಯಲ್ಲಿ ಹುಡುಕಿದರೂ ಯುವಕನ ದೇಹ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ದಳದವರ ಸಹಾಯದಿಂದ ನದಿಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಸದ್ಯ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು.. ಪಿಡಿಒ ಹೇಳಿದ್ದೇನು?