ಚಿಕ್ಕಬಳ್ಳಾಪುರ: ಅಕ್ಷರ ದಾಸೋಹದ ನೌಕರರಿಗೆ ಕನಿಷ್ಠ ವೇತನಕ್ಕೆ ಆಗ್ರಹಿಸಿ ಜಿಲ್ಲೆಯ ಗೌರಿಬಿದನೂರು ನಗರ ಗಾಂಧಿ ವೃತ್ತದ ಬಳಿ ಸಿಪಿಎಂ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 1 ಲಕ್ಷ 19 ಸಾವಿರ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕನಿಷ್ಠ ವೇತನ ₹2600 ಹಾಗೂ ₹2700 ರೂಪಾಯಿಗಳನ್ನು ಕೊಡಲಾಗುತ್ತಿದೆ. ಕನಿಷ್ಠ ವೇತನ ದಿನಕ್ಕೆ 250 ರೂ. ಕೂಲಿ ಕೊಡುತ್ತಿದ್ದು, ತಿಂಗಳಿಗೆ 7500 ರೂಪಾಯಿಗಳಷ್ಟು ಸಂಬಳ ಸಿಗುತ್ತದೆ. ಆದರೆ, ಅಕ್ಷರ ದಾಸೋಹ ನೌಕರರಿಗೆ ಮಾತ್ರ ಇನ್ನೂ ಕಡಿಮೆ ವೇತನವನ್ನು ನೀಡಲಾಗುತ್ತಿದೆ. ಇದರಿಂದ ಪ್ರತಿನಿತ್ಯದ ಜೀವನವನ್ನು ಸಾಗಿಸಲು ಕಷ್ಟ ಸಾಧ್ಯವಾಗಿದೆ ಎಂದಿದ್ದಾರೆ.
ಇದರ ಸಲುವಾಗಿಯೇ ಹೋರಾಟ ಮಾಡಲು ಬೀದಿಗೆ ಇಳಿದಾಗ ರಾಜ್ಯ ಸರ್ಕಾರ ಬಿಡುತ್ತಿಲ್ಲ. ಇನ್ನೂ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಾಗ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡುವುದಾಗಿ ತಿಳಿಸಿದರು. ಆದರೆ, ಬಜೆಟ್‌ನಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸಚಿವ ಸುರೇಶ್ ಕುಮಾರ್ ನಮ್ಮ ಬೇಡಿಕೆಗಳು ಸರಿಯಿದ್ದು, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಪತ್ರ ಬರೆದರೆ ಗೌರವ ಧನ ಬರುವುದಿಲ್ಲ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಕನಿಷ್ಠ 7500 ರೂಪಾಯಿಗಳ ವೇತನ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.