ಚಿಕ್ಕಬಳ್ಳಾಪುರ : ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿವಾದದ ಹಿನ್ನೆಲೆ ದಾಯಾದಿಗಳ ನಡುವೆ ಮಾತಿಗೆ ಮಾತು ಬೆಳೆದು ಮಚ್ಚಿನಿಂದ ಹಲ್ಲೆ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದ್ಯಾವಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವಗಾನಹಳ್ಳಿ ಗ್ರಾಮದಲ್ಲಿ ಅಶ್ವತ್ಥರೆಡ್ಡಿ, ಹನುಮಂತ ರೆಡ್ಡಿ, ನಾರಾಯಣ ರೆಡ್ಡಿ, ಸುನೀಲ ಎಂಬುವರ ಮಧ್ಯೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಸುಮಾರು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಈಗಾಗಲೇ ಸಾಕಷ್ಟು ಬಾರಿ ಪೊಲೀಸ್ ಠಾಣೆಗಳಲ್ಲಿ ರಾಜಿ ನಡೆದಿತ್ತು.
ಆದರೆ, ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಸಾವಿತ್ರಮ್ಮ ಎಂಬುವವರ ಜಾಗದಲ್ಲಿ ಹುಣಸೆ ಮರದ ವಿಚಾರಕ್ಕಾಗಿ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಮೇಲೆ ತಿಳಿಸಲಾದವರು ದೊಣ್ಣೆ ಮತ್ತು ಮಚ್ಚಿನಿಂದ ಅಮಾನುಷವಾಗಿ ಮೂರು ಜನ ಅಕ್ಕ-ತಂಗಿಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಮೈಸೂರು: ಪತಿ ಬುದ್ಧಿ ಹೇಳಿದ್ದಕ್ಕೆ ಪತ್ನಿ ಆತ್ಮಹತ್ಯೆ
ಸದ್ಯ ಮಚ್ಚು ಏಟಿನಿಂದ ಸಾವಿತ್ರಮ್ಮರವರಿಗೆ ತೀವ್ರ ಗಾಯವಾಗಿದ್ದು, ಗೌರಿಬಿದನೂರು ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಅಶ್ವತ್ಥರೆಡ್ಡಿ, ಹನುಮಂತ ರೆಡ್ಡಿ, ನಾರಾಯಣ ರೆಡ್ಡಿ, ಸುನೀಲ ಎಂಬುವರ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.