ಚಿಕ್ಕಬಳ್ಳಾಪುರ: ಸೋಮವಾರ ಪಕ್ಷ ಸಂಘಟನೆ ಸೇರಿದಂತೆ ಮುಂದಿನ ಬೈ ಎಲೆಕ್ಷನ್ ಬಗ್ಗೆ ಮಾಜಿ ಸಚಿವ ಎನ್. ಹೆಚ್. ಶಿವಶಂಕರ್ ರೆಡ್ಡಿ ಸೇರಿದಂತೆ ಜಿಲ್ಲಾ ಮುಂಖಂಡರು, ಅಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಟಿ ನಡೆಸುತ್ತಿದ್ದಂತೆ ಇಂದು ಅನರ್ಹ ಶಾಸಕ ಡಾ. ಕೆ.ಸುಧಾಕರ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇಷ್ಟು ದಿನ ಸುಮ್ಮನಿದ್ದ ಸುಧಾಕರ್ ಇಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು. ವೈಯಕ್ತಿಕ ವಿಷಯ ಮಾತಾಡಲ್ಲ ಎನ್ನುತ್ತಲೇ ಹರಿಹಾಯ್ದ ಅವರು, ಮೈತ್ರಿ ಸರ್ಕಾರದ ದೋರಣೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಕುಮಾರಸ್ವಾಮಿ ಮನೆ ಬಾಗಿಲು ಮುಂದೆ ಒಂದೂವರೆ ಗಂಟೆ ಕಾದು, ತಮ್ಮ ಕ್ಷೇತ್ರದ ಬಗ್ಗೆ ಹಗುರವಾಗಿ ಮಾತನಾಡಿದ ಬಗ್ಗೆ ಸಿದ್ದರಾಮಯ್ಯ ಬಳಿ ಹೇಳಿಕೊಂಡ ನೋವನ್ನ ಬಿಚ್ಚಿಟ್ಟರು.
ನಿಗಮ ಮಂಡಳಿ ಸ್ಥಾನವನ್ನು ನಾನೇನು ಕೇಳಿರಲಿಲ್ಲ. ನಮ್ಮ ಪಕ್ಷದ ಮುಖಂಡರೇ ನನಗೆ ಯಾವುದೇ ಸ್ಥಾನ ಕೊಡದಂತೆ ಅಡ್ಡಿಪಡಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾಗಿ ಸುಧಾಕರ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟರು. ಇನ್ನು ಲೋಕಸಭೆ ಚುನಾವಣೆ ನಂತರದಲ್ಲಾದ ಬದಲಾವಣೆ ಬಗ್ಗೆಯೂ ಅವರು ಮಾತನಾಡಿದರು.
ರಮೇಶ್ ಕುಮಾರ್ ವಿರುದ್ಧ ಗರಂ:
ಇನ್ನು ಅನರ್ಹರನ್ನ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ತೆಗೆದುಕೊಳ್ಳಲ್ಲ ಎಂಬ ನಿರ್ಧಾರದಿಂದ ರಮೇಶ್ ಕುಮಾರ್ ಖುಷಿಯಾಗಿಯೇ ಒಂದು ಲೀಟರ್ ಮಜ್ಜಿಗೆ ಕುಡಿದರು ಎಂದು ಗರಂ ಆದರು. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಕುರಿತು ಮೃದು ಧೋರಣೆ ತೋರಿದ ಸುಧಾಕರ್ ಹತ್ತಾರು ಸಚಿವರ ಬದಲಿಗೆ ನಿಮ್ಮನ್ನ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿದ್ದರೆ ಅದೆಷ್ಟೋ ಒಳ್ಳೇ ಕೆಲಸ ಆಗುತ್ತಿತ್ತು ಎಂದು ಪಶ್ಚಾತ್ತಾಪ ಪಡ್ತಿದ್ದೇನೆ ಎಂದಿದ್ದರಂತೆ. ಅದ್ಯಾರು ಏನೇ ಹೇಳಿದರೂ ನೀವು ಕೆಲಸ ಮಾಡಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕುಮಾರಸ್ವಾಮಿ ನೀಡಿದ್ದರು ಎಂದು ಸುಧಾಕರ್ ಹೇಳಿದ್ರು.