ಚಿಕ್ಕಬಳ್ಳಾಪುರ: ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಚದಲಪುರ ಗೇಟ್ ಬಳಿ ನಡೆದಿದೆ.
ಆಂಧ್ರಪ್ರದೇಶದಿಂದ ಬೆಂಗಳೂರಿನತ್ತ ರಕ್ತಚಂದನ ಸಾಗಾಟ ಮಾಡಲಾಗುತ್ತಿದೆ ಅನ್ನೋ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಚಿಕ್ಕಬಳ್ಳಾಪುರ ಅರಣ್ಯಾಧಿಕಾರಿಗಳು, ಚಿಕ್ಕಬಳ್ಳಾಪುರ ನಗರ ಹೊರವಲಯದ ಚದಲಪುರ ಗೇಟ್ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಶಂಕಿತ ಸ್ಕಾರ್ಪಿಯೋ ವಾಹನವನ್ನ ಅಡ್ಡಗಟ್ಟಿದಾಗ ಖದೀಮರು ವಾಹನವನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಬಳಿಕ ವಾಹನವನ್ನ ತಪಾಸಣೆ ನಡೆಸಿದಾಗ ಸುಮಾರು 500 ಕೆಜಿಯಷ್ಟು ತೂಕದ 15 ತುಂಡುಗಳು ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಕ್ತಚಂದನಕ್ಕೆ ಬಾರಿ ಡಿಮ್ಯಾಂಡ್ ಇರೋದ್ರಿಂದ, ಒಂದು ಕೋಟಿಗೂ ಹೆಚ್ಚು ಮೌಲ್ಯ ಇರಬಹುದು ಅಂತ ಅಂದಾಜಿಸಲಾಗಿದೆ. ಚಾಲಾಕಿ ಕಳ್ಳರು ಸ್ಕಾರ್ಪಿಯೋ ವಾಹನದ ನಂಬರ್ ಪ್ಲೇಟ್ ಬದಲಿಸಿ ಸಾಗಿಸುತ್ತಿದ್ದರು ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿದ್ದಾಗ ಆಂಧ್ರದ ನಂಬರ್ ಪ್ಲೇಟ್, ತಮಿಳುನಾಡಿನಲ್ಲಿದ್ದಾಗ ತಮಿಳುನಾಡು ನಂಬರ್, ಕರ್ನಾಟಕದಲ್ಲಿದ್ದಾಗ ಕರ್ನಾಟಕದ ನಂಬರ್ ಪ್ಲೇಟ್ ಬದಲಿಸುತ್ತಿದ್ದರು ಅನ್ನೋದಕ್ಕೆ ಕಾರಿನಲ್ಲಿದ್ದ ನಂಬರ್ ಪ್ಲೇಟ್ಗಳೇ ಸಾಕ್ಷಿಯಾಗಿವೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಡಿಎಫ್ಓ ಅರಸಲನ್, ಆರ್ಎಫ್ಓ ವಿಕ್ರಮ್ ಸೇರಿದಂತೆ ಹಲವು ಅರಣ್ಯಾಧಿಕಾರಿಗಳು ಭಾಗಿಯಾಗಿದ್ದರು.