ಚಿಕ್ಕಬಳ್ಳಾಪುರ: ಬಡಾವಣೆಗೆ ನಿವೇಶನ ಮಾಡಿಕೊಡಲು 40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗೌರಿಬಿದನೂರು ನಗರಸಭಾಧ್ಯಕ್ಷರ ಪತಿ ಸೇರಿದಂತೆ ಮೂವರು ನಗರಸಭೆ ಸದಸ್ಯರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಯಲಹಂಕದ ರಾಜಾನುಕುಂಟೆ ನಿವಾಸಿ ಮಂಜುನಾಥ ರೆಡ್ಡಿ ಗೌರಿಬಿದನೂರಿನಲ್ಲಿ 8 ಎಕರೆ ಭೂಮಿಯನ್ನು ರೈತರಿಂದ ಖರೀದಿಸಿ ಭೂಪರಿವರ್ತನ ಕಾರ್ಯಗಳನ್ನು ಕೈಗೊಂಡು ಬಡಾವಣೆ ಅಭಿವೃದ್ಧಿಪಡಿಸಿ 133 ನಿವೇಶನಗಳನ್ನಾಗಿ ಮಾರ್ಪಡಿಸಿ ಖಾತೆ ಮಾಡಿಕೊಡಲು ನಗರಸಭೆಗೆ ಮನವಿ ಸಲ್ಲಿಸಿದ್ದರು.
ಇದೇ ವಿಚಾರವಾಗಿ 133 ನಿವೇಶಗಳಿಗೆ ಖಾತೆ ಬಿತ್ತರಿಸಲು ಗೌರಿಬಿದನೂರು ನಗರಸಭೆಯ ಅಧ್ಯಕ್ಷರಾದ ರೂಪಾ ಅವರ ಪತಿ ಹಾಗೂ ಮಾಜಿ ಸದಸ್ಯ ಅನಂತರಾಜು, ನಗರಸಭಾ ಸದಸ್ಯ ಗೋಪಿನಾಥ್, ನಗರಸಭೆ ಸದಸ್ಯೆಯ ಪತಿ ಮೈಲಾರಿ, ಹಿಂದಿನ ನಗರಸಭಾ ಸದಸ್ಯರು ಹಾಗೂ ಪ್ರಸ್ತುತ ನಗರಸಭಾ ಸದಸ್ಯರಾಗಿರುವವರ ಪತಿ ಮಂಜುನಾಥ್ ಪ್ರತಿ ಎಕರೆಗೆ 5 ಲಕ್ಷ ರೂಪಾಯಿಯಂತೆ, 8 ಎಕರೆಗೆ ಒಟ್ಟು 40 ಲಕ್ಷ ರೂಪಾಯಿಗಳ ಲಂಚಕ್ಕಾಗಿ ಒತ್ತಾಯಿಸಿದ್ದರು.
ಒಪ್ಪಂದದಂತೆ ಇಂದು 20 ಲಕ್ಷ ರೂಪಾಯಿಗಳನ್ನು ಯಲಹಂಕದ ಖಾಸಗಿ ರೆಸಾರ್ಟ್‌ನಲ್ಲಿ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತಾ ಅಧಿಕಾರಿಗಳು ಟ್ರ್ಯಾಪ್ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಆರೋಪಿಗಳನ್ನು ಯಲಹಂಕ ಬಳಿಯ ರಾಜಾನುಕುಂಟೆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಆರೋಗ್ಯ ತಪಾಸಣೆಯ ನಂತರ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಗೆ ರವಾನಿಸುವುದಾಗಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಎಎಪಿ ಸಚಿವರ ವಿರುದ್ಧ ಸುಕೇಶ್ ಚಂದ್ರಶೇಖರ್ ಆರೋಪದ ತನಿಖೆ: ತ್ರಿಸದಸ್ಯ ಸಮಿತಿಯಿಂದ ಎಲ್‌ಜಿಗೆ ವರದಿ ಸಲ್ಲಿಕೆ