ಗುಡಿಬಂಡೆ (ಚಿಕ್ಕಬಳ್ಳಾಪುರ): ಕಳೆದ ಮಾರ್ಚ್ ತಿಂಗಳಿನಿಂದ ನಮ್ಮ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಮುಖಂಡ ಎಚ್.ಪಿ. ಲಕ್ಷ್ಮೀ ನಾರಾಯಣ ಆರೋಪಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಎಚ್.ಪಿ. ಲಕ್ಷ್ಮೀ ನಾರಾಯಣ, ಪ್ರಪಂಚವನ್ನೇ ಕಾಡುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರು, ಕೂಲಿ-ಕಾರ್ಮಿಕರು, ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ. ಬಡ ಜನತೆಯ ಜೀವನ ನಿರ್ವಹಣೆ ಶೋಚನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೀಲ್‍ಡೌನ್, ಲಾಕ್‍ಡೌನ್‍ಗಳಿಂದಾಗಿ ಬಹುತೇಕ ವ್ಯಾಪಾರ ವಹಿವಾಟುಗಳು ಕುಸಿದಿವೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆಯಿಲ್ಲದೆ, ಬೆಳೆದ ಉತ್ಪನ್ನಗಳನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ. ಇದರ ಜೊತೆಗೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮೊದಲಾದವನ್ನು ಜಾರಿ ಮಾಡಿ ರೈತರಿಗೆ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿದರು.
ಕೊರೊನಾ ಪರೀಕ್ಷೆ ವಿಳಂಬ: ಸೋಂಕಿತರು ಪತ್ತೆಯಾದ ಮೇಲೆ ಆ ಪ್ರದೇಶವನ್ನು ಸೀಲ್‍ಡೌನ್ ಮಾಡುವುದು, ಸಾನಿಟೈಸ್ ಮಾಡುವುದು ಸೇರಿದಂತೆ ಹಲವು ಅಗತ್ಯ ಕ್ರಮಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಸೋಂಕು ಪರೀಕ್ಷೆಯ ಫಲಿತಾಂಶ ಬರುವುದೇ ತಡವಾಗುತ್ತಿದೆ. ಅಲ್ಲದೆ, ಸೋಂಕಿತರು ಪತ್ತೆಯಾದ ಬಳಿಕ ಆ ಪ್ರದೇಶದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಕೂಡಾ ವಿಳಂಬವಾಗುತ್ತಿದೆ. ಕೊರೊನಾ ಪರೀಕ್ಷೆ ಸಹ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು.
ಅವೈಜ್ಞಾನಿಕ ಬೆಳೆ ಸಮೀಕ್ಷೆ: ರಾಜ್ಯದಾದ್ಯಂತ ನಡೆಯುತ್ತಿರುವ ಬೆಳೆ ಸಮೀಕ್ಷೆಯು ಅವೈಜ್ಞಾನಿಕವೋ ಅಥವಾ ಸಮೀಕ್ಷೆಗಾರರ ತಪ್ಪೋ ಎಂಬುದು ತಿಳಿಯದು. ಬೆಳೆ ಬೆಳೆದ ಜಮೀನುಗಳಲ್ಲಿ ಬೀಳು ಎಂತಲೂ, ಮತ್ತೊಂದು ಕಡೆ ಪರ್ಯಾಯ ಬೆಳೆಗಳ ನಮೂದು ಹಾಗೂ ಬೀಳು ಜಮೀನುಗಳಲ್ಲಿ ಬೆಳೆ ಬೆಳೆದಂತೆ ಸಮೀಕ್ಷೆಯಲ್ಲಿ ನಮೂದಿಸಿದ್ದಾರೆ. ಪರಿಣಾಮ, ಸರ್ಕಾರದಿಂದ ರೈತರಿಗೆ ಸಿಗಬೇಕಾದ ಅನೇಕ ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.