ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದಲ್ಲಿರುವ ಬಾಗೇಪಲ್ಲಿ ತಾಲೂಕನ್ನು ಬರಗಾಲ ಬೆಂಬಿಡಡೆ ಕಾಡುತ್ತಿದ್ದು, ಕೃಷಿಕ ವರ್ಗದವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಪಶು ಪಾಲನೆ ಇಲ್ಲಿನ ರೈತರ ಕಸುಬಾಗಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗಿದ್ದರೆ ಬೆಟ್ಟಗುಡ್ಡಗಳಲ್ಲಿ ಹುಲ್ಲು ಚಿಗುರೊಡೆಯುತ್ತಿತ್ತು. ಈಗಾಗಲೇ ಮೇವಿನ ಕೊರತೆಯಿಂದ ಪಶು ಆಹಾರದ ಬೆಲೆ ಗಗನಕ್ಕೇರಿದೆ. ಗುಡ್ಡಗಳಲ್ಲಿ, ಬಯಲಿನಲ್ಲಿನ ಹುಲ್ಲು ಸಂಗ್ರಹಿಸಿ ತರಲು ಮೇವು ಸಿಗದೆ ರೈತರು ಕಂಗಾಲಾಗಿದ್ದಾರೆ.
ಈ ಮಧ್ಯೆ ಗ್ರಾಮಗಳ ಸಮೀಪ ಬೆಳೆದಿರುವ ಅರಳಿ, ಬೇವು, ಗೋಣಿ, ಆಲ ಮುಂತಾದ ಮರಗಳ ಸೊಪ್ಪನ್ನು ಕೊಯ್ದು ಜಾನುವಾರುಗಳ ಹಸಿವು ನೀಗಿಸುತ್ತಿದ್ದಾರೆ. ಈಗ ಮರಗಳಲ್ಲಿನ ಸೊಪ್ಪು ಮುಗಿಯುತ್ತಾ ಬಂದಿದ್ದು ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.
ಕೆರೆ, ಕುಂಟೆಗಳು ಖಾಲಿ ಆಗಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗಿದೆ. ಮಳೆಯಾದರೆ ಮಾತ್ರ ಸಮಸ್ಯೆ ನೀಗುತ್ತದೆ. ಆದ್ರೆ ಮಳೆ ಕೊರತೆಯಿಂದ ಸಮಸ್ಯೆ ತೀವ್ರಗೊಳ್ಳುತ್ತಿದೆ. ಕೆಲ ರೈತರು ಈಗಾಗಲೇ ತಮ್ಮ ಜಮೀನುಗಳನ್ನು ಬಿತ್ತನೆಗೆ ಸಿದ್ದಗೊಳಿಸಿಕೊಂಡಿದ್ದರೆ, ಮತ್ತೆ ಕೆಲವರು ಮಳೆಗಾಗಿ ಕಾಯುತ್ತಿದ್ದಾರೆ.
ಶೇಖರಿಸಿಕೊಂಡಿದ್ದ ಮೇವು ಖಾಲಿ ಆಗುತ್ತಿದೆ. ಹೆಚ್ಚು ಹುಲ್ಲು ಶೇಖರಿಸಿಟ್ಟುಕೊಂಡವರು ದುಪ್ಪಟ್ಟು ಬೆಲೆ ಹೇಳುತ್ತಿರುವುದರಿಂದ ಜಾನುವಾರು ಮಾಲೀಕರು ಕಂಗಾಲಾಗಿದ್ದಾರೆ. ಪೂರ್ವ ಮುಂಗಾರಿನ ಕೊರತೆ ಹಿನ್ನೆಲೆಯಲ್ಲಿ ಹುಲ್ಲಿನ ಬೆಲೆ ಏರುವ ಆತಂಕದಲ್ಲಿ ರೈತರಿದ್ದಾರೆ.
ಈಗಾಗಲೇ 3 ಅಡಿಯಿಂದ 4 ಅಡಿ ಎತ್ತರದ ಒಂದು ಮಾರು (50 ಕಂತೆ) ಒಣ ಹುಲ್ಲಿನ ಬೆಲೆ ₹7 ಸಾವಿರದಿಂದ ₹8 ಸಾವಿರದವರೆಗೆ ಇದೆ. ಬೆಳೆದ ರಾಗಿಗಿಂತ ಅದರ ಹುಲ್ಲಿನ ಬೆಲೆಯೇ ದುಪ್ಪಟ್ಟಾಗಿದೆ. ರಾಸುಗಳಿಗೆ ರಾಗಿ ಹುಲ್ಲು ಪೌಷ್ಟಿಕ ಆಹಾರವಾಗಿದೆ. ಹಾಗಾಗಿ ಜಾನುವಾರುಗಳನ್ನು ಸಾಕಿರುವವರು ದುಬಾರಿ ಬೆಲೆ ತೆತ್ತು ಹುಲ್ಲು ಖರೀದಿಸುವುದು ಅನಿವಾರ್ಯವಾಗಿದೆ ಎಂದು ರೈತರು ಹೇಳುತ್ತಾರೆ.