ಚಿಕ್ಕಬಳ್ಳಾಪುರ: ಇಡಿ ಅಧಿಕಾರಿಗಳ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಆದಷ್ಟು ಬೇಗ ಬಂಧನ ಮುಕ್ತರಾಗಬೇಕು ಎಂದು ಕೋರಿ, ಚಿಕ್ಕಬಳ್ಳಾಪುರ ಕೈ ಕಾರ್ಯಕರ್ತರು ತಾಲೂಕಿನ ಹಾರೋಹಳ್ಳಿ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನು ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜಿ.ಹೆಚ್ ನಾಗರಾಜ್, ಬಿಜೆಪಿ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಉದ್ದೇಶ ಪೂರ್ವಕವಾಗಿಯೇ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸೇಡಿನ ರಾಜಕಾರ ಮಾಡುತ್ತಿದೆ. ದೇಶದ ಇತಿಹಾಸದಲ್ಲೇ ಇಂತಹ ಸೇಡಿನ ರಾಜಕೀಯ ಯಾರೂ ನೋಡಿಲ್ಲ. ಯಾರಾದರೂ ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಕ್ಕೆ ಯಾರೂ ಅಡ್ಡಿ ಬರುವುದಿಲ್ಲ. ಆದರೆ, ಇವರ ಉದ್ದೇಶವೇ ಸರಿ ಇಲ್ಲದಿದ್ದಾಗ, ಆಲೋಚನೆಗಳೇ ತಪ್ಪು ಇರುವಾಗ ಇದನ್ನು ಪ್ರಶ್ನೆ ಮಾಡಲೇಬೇಕಾಗುತ್ತದೆ ಎಂದರು.
ಬಿಜೆಪಿಯ ಷಡ್ಯಂತ್ರ, ಮೋಸ, ವಂಚನೆಯನ್ನು ಖಂಡಿಸುತ್ತೇವೆ. ಇದಕ್ಕೆ ತಕ್ಕ ಉತ್ತರ ನೀಡಲು ಜನಾಭಿಪ್ರಾಯ ರೂಪಿಸಲಾಗುವುದು. ಇದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಇದೆ. ಎಲ್ಲರೂ ಒಗ್ಗಟ್ಟಾಗಿ ಎದುರಿಸುವ ಅಗತ್ಯತೆ ಇದ್ದು, ಕಾಂಗ್ರೆಸ್ ಈ ಕೆಲಸ ಮಾಡಲಿದೆ. ಜನರಿಗೆ ಸತ್ಯವನ್ನು ಮನವರಿಗೆ ಮಾಡಿಕೊಡಲಾಗುವುದು ಎಂದು ಜಿ.ಹೆಚ್ ನಾಗರಾಜ್ ತಿಳಿಸಿದರು.
ಇನ್ನೂ ಡಿ.ಕೆ. ಶಿವಕುಮಾರ್ ಬೇಗನೆ ಆರೋಪ ಮುಕ್ತರಾಗಬೇಕೆಂದು ಡಿಕೆಶಿ ಬೆಂಬಲಿಗರು ಶಿರಡಿ ಸಾಯಿಬಾಬಾ ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್, ಕೆಪಿಸಿಸಿ ಸದಸ್ಯ ಎಸ್.ಪಿ. ಶ್ರೀನಿವಾಸ್, ಮುಖಂಡರಾದ ಜಯರಾಂ, ನಾರಾಯಣಸ್ವಾಮಿ, ಲಕ್ಷ್ಮಣ್ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.