ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ಕುರಿ ಮೇಯಿಸಲು ಹೋಗಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಚ್ಚನಹಳ್ಳಿಯ ಬಳಿ ನಡೆದಿದೆ.
ದರ್ಶನ್ (15), ಶಿವ (14) ಮೃತ ಬಾಲಕರು. ದಿಬ್ಬೂರಹಳ್ಳಿ ಗ್ರಾಮದ ಮೂರ್ತಿ ಹಾಗೂ ನಾಗಮಣಿ ದಂಪತಿಗಳ ಮಗ ದರ್ಶನ್, ಕಾಚಹಳ್ಳಿ ಗ್ರಾಮದ ಮಂಜುನಾಥ ಮತ್ತು ಗಂಗರತ್ನಮ್ಮ ದಂಪತಿಯ ಮಗ ಶಿವ ಮೃತಪಟ್ಟಿದ್ದಾರೆ. ಶಿವ ಎಂಬ ಬಾಲಕ ಶಾಲೆಗೆ ರಜೆ ಇದ್ದ ಕಾರಣ ದಿಬ್ಬೂರಹಳ್ಳಿಯ ಸಂಬಂಧಿಕರಾದ ಮೂರ್ತಿ ಅವರ ಮನೆಗೆ ಬಂದಿದ್ದ.
ಕುರಿ ಮೇಯಿಸಲೆಂದು ದರ್ಶನ್ ಜೊತೆ ಶಿವ ತೆರಳಿದ್ದಾನೆ. ಕುರಿ ಮೇಯಿಸುತ್ತಾ ಬಚ್ಚನಹಳ್ಳಿಯ ಬಳಿಯ ಆಶ್ರಯ ವಸತಿ ಶಾಲೆಯ ಹಿಂಭಾಗದಲ್ಲಿರುವ ಯರ್ರಕುಂಟೆ ಹತ್ತಿರ ಕುರಿಗಳನ್ನು ಮೇಯಲು ಬಿಟ್ಟು, ಕೆರೆಯಲ್ಲಿ ಈಜಲು ಹೋಗಿ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ, ಮೃತ ಬಾಲಕರ ಶವಗಳನ್ನು ನೀರಿನಿಂದ ಹೊರ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.