ಚಿಕ್ಕಬಳ್ಳಾಪುರ: ಒಂದು ಕಡೆ ಅತಿಯಾದ ಮಳೆಯಿಂದ ಜನರು ತತ್ತರಿಸಿದ್ದರೆ, ಇತ್ತ ಚಿಕ್ಕಬಳ್ಳಾಪುರದ ಜನ ಉತ್ತಮ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.
ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಈ ಬಾರಿಯಾದರೂ ಉತ್ತಮ ಮಳೆ-ಬೆಳೆ ಆಗಲಿ ಎಂದು ಪ್ರಾರ್ಥಿಸಿ ಅಮಾನಿ ಬೈರಸಾಗರ ಕೆರೆ ಬಳಿಯ ಒಡ್ಡಮ್ಮ ದೇವಿಗೆ ವಿಶೇಷ ಪೂಜೆ, ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಲಾಯಿತು.
ಬೆಳಿಗ್ಗೆಯಿಂದ ಒಡ್ಡಮ್ಮ ದೇವಿಗೆ ಸ್ವಸ್ತಿವಾಚನ, ಪುಣ್ಯಾಹ, ಮೂಲ ಶಿಲಾ ಮೂರ್ತಿಗೆ ಪಂಚಾಮೃತಾಭಿಷೇಕದ ಜತೆಗೆ ನಮಕ, ಚಮಕ ಪಾರಾಯಣದೊಂದಿಗೆ ಶಿಲಾ ಮೂರ್ತಿ ಸುತ್ತ ಜೇಡಿ ಮಣ್ಣಿನಿಂದ ಕಟ್ಟೆ ಕಟ್ಟಿ ಕೆರೆಯ ನೀರನ್ನು ಬಿಂದಿಗೆಗಳಲ್ಲಿ ತುಂಬಿಕೊಂಡು ಜಲಾಭಿಷೇಕ ಮಾಡಿದರು. ನಂತರ ದೇವಿಗೆ ವಿಶೇಷ ಅಲಂಕಾರ, ಪೂಜೆ, ಮಹಾ ನೀರಾಜನ, ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿತರಿಸಲಾಯಿತು.
ವೇದ ಮೂರ್ತಿಗಳಾದ ಸ.ನ.ನಾಗೇಂದ್ರ, ಮಂಜುನಾಥ ಭಾಗವತ್, ಗು.ನ.ನಾಗೇಂದ್ರಭಟ್, ರವಿಕುಮಾರ್, ರಂಗರಾಜ್, ರಾಮನಾಥ ದೀಕ್ಷಿತ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.