ಚಾಮರಾಜನಗರ: ಬಕೆಟ್ ಬೆಲ್ಲ, ಜೋನಿ ಬೆಲ್ಲದ ಕಾಲದಲ್ಲಿ ಅಚ್ಚಿನ ಬೆಲ್ಲವನ್ನು ಪರಿಚಯಿಸಿದ ಗಡಿ ಜಿಲ್ಲೆಯಲ್ಲಿ ಆಲೆಮನೆಗಳು ಈಗ ಒಂದೊಂದಾಗಿ ತಮ್ಮ ಸದ್ದು ನಿಲ್ಲಿಸುತ್ತಿವೆ. ಯಾವುದೇ ಹಳ್ಳಿಗೆ ಎಡತಾಕಿದರೂ ಬರುತಿದ್ದ ಬೆಲ್ಲದ ಘಮಲು ಮರೆಯಾಗುತ್ತಿದೆ.
ಹೌದು, ಎರಡು ಎಕರೆ ಕಬ್ಬು ಬೆಳೆದ ರೈತನೂ ಸ್ವಂತದೊಂದು ಆಲೆಮನೆ ಮಾಡಿ ಬೆಲ್ಲ ತಯಾರಿಸುತ್ತಿದ್ದ. ಆದ್ರೀಗ ಜಿಲ್ಲೆಯಲ್ಲಿ ಆಲೆಮನೆಗಳ ಸಂಖ್ಯೆ 60 ದಾಟಲ್ಲ ಎನ್ನುತ್ತವೆ ಮಾರುಕಟ್ಟೆ ಮೂಲಗಳು.
ಗ್ರಾಹಕರಿಗೆ ಸಕ್ಕರೆ ಮೇಲಿನ ಅಕ್ಕರೆ ಹೆಚ್ಚಾಯ್ತು. ಟೀ- ಕಾಫಿ ಅಷ್ಟೇ ಏಕೆ ಪಾಯಸಕ್ಕೂ ಹಳ್ಳಿಗಳಲ್ಲಿ ಸಕ್ಕರೆಯನ್ನೇ ಉಪಯೋಗಿಸುತ್ತಾರೆ, ಬೆಲ್ಲವನ್ನು ಇದ್ದಕ್ಕಿದ್ದಂತೆ ಸೇವಿಸುವುದನ್ನೇ ನಿಲ್ಲಿಸಿದ್ದಾರೆ ಎಂಬುದು ಬೆಲ್ಲದ ದಲ್ಲಾಳಿವೊಬ್ಬರ ಅಳಲು.
ದಶಕದ ಹಿಂದೆಯಿಂದ ಚಾಮರಾಜನಗರ ಎಪಿಎಂಸಿಯಲ್ಲಿ 50 ಲಕ್ಷ ಬೆಲ್ಲ ಬಿಕರಿಯಾಗುತ್ತಿತ್ತು. ಇಂದು 6 ಲಕ್ಷವೂ ದಾಟುತ್ತಿಲ್ಲ. ಚಾಮರಾಜನಗರದ ಬೆಲ್ಲದಚ್ಚು ನೆರೆಯ ಆಂಧ್ರಪ್ರದೇಶ, ಕೇರಳದಲ್ಲಿ ಉತ್ತಮ ಮಾರುಕಟ್ಟೆ ಹೊಂದಿತ್ತು. ಈಗ ನಮ್ಮ ಬೆಲ್ಲವನ್ನು ಕೇಳುವವರೇ ಇಲ್ಲದಂತಾಗಿದೆ. ಲಾಭ ಬೇಡ ಖರ್ಚು ಕಳೆದು ಕೂಲಿ ಸಿಕ್ರೆ ಸಾಕು ಎಂಬಂತಾಗಿದೆ ಆಲೆ ಮನೆಯ ಕಥೆ ಎನ್ನುತ್ತಾರೆ ಸೋಮವಾರಪೇಟೆಯಲ್ಲಿ ಆಲೆಮನೆ ನಡೆಸುತ್ತಿರುವ ನಂದೀಶ್.
ಚಾಮರಾಜನಗರದ ಬೆಲ್ಲದಚ್ಚಿಗೆ ಬೇಡಿಕೆ ಕುಸಿಯಲು ಮತ್ತೊಂದು ಕಾರಣ ಬೆಲ್ಲದ ಅಲ್ಪಾಯಸ್ಸು. ಸಕ್ಕರೆಗಿಂತ ಬೆಲ್ಲ ಬೇಗ ಬೂಸ್ಟ್ ಇಲ್ಲವೇ ನೀರಾಗುವುದರಿಂದ ಯಾರೂ ಬಳಸುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲೂ ಸಕ್ಕರೆ ಬಳಕೆ ಹೆಚ್ಚಿರುವುದರಿಂದ ಎಲ್ಲರೂ ಕಾರ್ಖಾನೆಗೆ ಕಬ್ಬನ್ನು ರವಾನಿಸುತ್ತಾರೆ. ಬೆಲ್ಲದ ಬೆಲೆಗೆ ಹೋಲಿಸಿದರೇ ಬೆಲ್ಲ ತಯಾರಿಕೆಯ ಖರ್ಚೆ ಹೆಚ್ಚಿದೆ ಎನ್ನುತ್ತಾರೆ ನಂದೀಶ್. ಹೀಗಾಗಿ ಬೆಲ್ಲ ದಿನೇ ದಿನೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದರಿಂದ ದೇಸಿ ಸೊಗಡಿನ ಆಲೆಮನೆಗಳು ತಮ್ಮ ಉಸಿರನ್ನು ನಿಲ್ಲಿಸುತ್ತಿವೆ.