ಚಾಮರಾಜನಗರ: ಯುಗಾದಿ ಎಂದರೆ ಚೈತ್ರ ಮಾಸದ ಮೊದಲ ದಿನ. ಪಂಚಾಂಗದ ಪೂಜೆ, ಬೇವು-ಬೆಲ್ಲ ಸರ್ವೇ ಸಾಮಾನ್ಯ. ಆದರೆ ಈ ಊರಿನಲ್ಲಿ ಹುಲಿ, ಕರಡಿ ಸೇರಿದಂತೆ ವಿವಿಧ ವೇಷಧಾರಿಗಳು ಬಣ್ಣದೋಕುಳಿ ಆಡುವ ಮೂಲಕ ವಿಶೇಷವಾಗಿ ಆಚರಣೆ ಮಾಡುತ್ತಾರೆ.
ಜಿಲ್ಲೆಯ ಬಹುಪಾಲು ಗ್ರಾಮಗಳಲ್ಲಿ ಯುಗಾದಿ ದಿನದಂದು ಹೋಳಿ (ಓಕುಳಿ) ಆಡುತ್ತಾರೆ. ಚಿಣ್ಣರು, ಹಿರಿಯರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದವರು ಬಣ್ಣ ಎರಚಾಟದಲ್ಲಿ ತೊಡಗುತ್ತಾರೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಣ್ಣದ ಓಕುಳಿ ಜೊತೆಗೆ ಕಳೆದ 3-4 ದಶಕಗಳಿಂದ ಹುಲಿ, ಕರಡಿ, ಜೋಕರ್ಗಳು, ಅಣಕು ಪಂಚಾಂಗ ಶ್ರವಣದ ವೇಷಧಾರಿಗಳು ಪ್ರತಿ ಮನೆ ಮನೆಗೂ ತೆರಳಿ ದವಸ-ಧಾನ್ಯ ಇಲ್ಲವೇ ಹಣ ಪಡೆಯುವ ಕುತೂಹಲಕಾರಿ ಪದ್ಧತಿ ಇದೆ.
ಕರಡಿ ವೇಷಧಾರಿಗಳು ಮೈಗೆ ಕಪ್ಪು ಬಣ್ಣ ಬಳಿದುಕೊಂಡು ಎತ್ತಿಗೆ ಕಟ್ಟುವ ಗೆಜ್ಜೆಗಳನ್ನು ಕಟ್ಟಿಕೊಳ್ಳುತ್ತಾರೆ. ಹುಲಿ ವೇಷಧಾರಿಗಳು ಹಳದಿ- ಕಪ್ಪು ಬಣ್ಣಗಳ ಪಟ್ಟೆಗಳನ್ನು ಲೇಪಿಸಿಕೊಂಡು ಜನರ ಮುಂದೆ ವಿವಿಧ ಕಸರತ್ತುಗಳನ್ನು ಮಾಡುತ್ತಾರೆ. ಪಾಳೇಗಾರರ ಯುದ್ಧ, ಪಂಚಾಂಗ ಶ್ರವಣದ ಅಣಕು, ಮೋಡಿ ವಿದ್ಯೆಯ ಅಣಕುಗಳನ್ನು ಮಾಡುತ್ತಾರೆ.
ಉಳಿದಂತೆ, ಪೊಲೀಸ್, ಕಳ್ಳ, ರಾಕ್ಷಸ, ಹನುಮ, ಒಂಟೆ ವೇಷಧಾರಿಗಳು ಆಗಾಗ್ಗೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಹಣ ಕೇಳುತ್ತಾರೆ. ಒಂದು ವೇಳೆ ಹಣ ಕೊಡದಿದ್ದರೆ ಮೈಗೆಲ್ಲಾ ಕಪ್ಪು ಬಣ್ಣ ಹಚ್ಚಿ ರಂಪವನ್ನೇ ಮಾಡುತ್ತಾರೆ.
ವರ್ಷಕ್ಕೊಮ್ಮೆ ನಡೆಯುವ ಈ ಸಂಭ್ರಮವನ್ನು ಸಾಮಾನ್ಯವಾಗಿ ಎಲ್ಲರೂ ಮನರಂಜನೆ ಎಂದೇ ಭಾವಿಸುತ್ತಾರೆ. ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಮಿಠಾಯಿ ಡಬ್ಬಿ, ತಕ್ಕಡಿಗಳನ್ನು ಹಾರಿಸುವ ಕರಡಿ, ಕೋತಿ ವೇಷಧಾರಿಗಳು ಬಳಿಕ ಮಾಲೀಕರನ್ನು ಸತಾಯಿಸಿ ಹಿಂತಿರುಗಿಸುತ್ತಾರೆ. ಬಣ್ಣ ಹಚ್ಚಿಸಿಕೊಳ್ಳದವರು ಕರಡಿ ವೇಷಧಾರಿಗಳನ್ನು ಕಂಡರೆ ನಿಜವಾಗಿಯೂ ಕರಡಿ ಬಂತು ಎಂದು ಬೆದರಿ ಓಡುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.