ಚಾಮರಾಜನಗರ: ಗಂಡನಿಂದ ಗಂಡಾಂತರ ಇದೆ ಎಂದು ಡಿಜಿಟಲ್ ಪೇಮೆಂಟ್ ಮೂಲಕ ಹಣ ಪೀಕಿದ್ದ ಕಳ್ಳ ಜ್ಯೋತಿಷಿ ಸೇರಿದಂತೆ ಬಾಲಕನನ್ನು ಚಾಮರಾಜನಗರ ಸೆನ್ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ನಿವಾಸಿಯಾದ ಅಶೋಕ್(27) ಮತ್ತು ಬಾಲಕನೊಬ್ಬ ಬಂಧಿತ ಆರೋಪಿಗಳು. ಚಾಮರಾಜನಗರ ತಾಲೂಕಿನ ಉಡಿಗಾಲದ ಮಹಿಳೆಯೊಬ್ಬರು ಜ್ಯೋತಿಷಿಯ ಮಾತು ಕೇಳಿ ಹಣ ಮತ್ತು ಚಿನ್ನಾಭರಣ ಕಳೆದುಕೊಂಡಿದ್ದವರು.
ಘಟನೆ ಹಿನ್ನೆಲೆ: ಯೂಟ್ಯೂಬ್ ಚಾನೆಲ್ವೊಂದರಲ್ಲಿ ಬಂದಿದ್ದ ಜಾಹೀರಾತು ಗಮನಿಸಿ ಫೋನಾಯಿಸಿದ್ದ ಮಹಿಳೆಗೆ ನಿನ್ನ ಗಂಡನಿಂದ ಮನೆಗೇ ಗಂಡಾಂತರ ಇದೆ ಎಂದು ನಂಬಿಸಿ 32 ಸಾವಿರ ರೂ. ಪೀಕಿದ್ದ. ಬಳಿಕ, ದಿಗ್ಬಂಧನ ಮಾಡಲು ಚಿನ್ನ ಬೇಕೆಂದು 55 ಸಾವಿರ ರೂ. ಮೌಲ್ಯದ ಚಿನ್ನಾಭರಣ ಪಡೆದು ಬಳಿಕ ಮಹಿಳೆ ಕರೆ ಮಾಡಿದರೇ ಕರೆ ಸ್ವೀಕರಿಸದೇ ಟೋಪಿ ಹಾಕಿದ್ದ.
ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಸೆನ್ ಪೊಲೀಸರು, ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 30 ಸಾವಿರ ರೂ. ಹಣ, ಚಿನ್ನದ ಒಡವೆಗಳು, 2 ಮೊಬೈಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ತಾತನ ಕೊಲೆ ಮಾಡಿ ಜಮೀನಿನಲ್ಲೇ ಶವ ಹೂತ ಮೊಮ್ಮಗನ ಬಂಧನ