ಚಾಮರಾಜನಗರ: ಸತತ ಮಳೆಗೆ ಕಾಡುಗಳು ಹಸಿರಾಗಿವೆ. ಪ್ರಾಣಿಗಳು-ಪಕ್ಷಿಗಳು ನವೋಲ್ಲಾಸದಿಂದ ಕ್ಯಾಮರಾ ಕಣ್ಣುಗಳಿಗೆ ಸೆರೆಯಾಗುತ್ತಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಅರಣ್ಯ ವಲಯದ ಕಾಡಂಚಿನ ರಸ್ತೆಯಲ್ಲಿ ನೀರು ಕುಡಿದು ಮಲಗಿ ರಿಲ್ಯಾಕ್ಸ್ ಮಾಡುತ್ತಿದ್ದ ಹುಲಿಯ ಚಿತ್ರಗಳು, ಬಿಳಿಗಿರಿ ರಂಗನ ಬೆಟ್ಟದ ಕೆ.ಗುಡಿ ಭಾಗದಲ್ಲಿ ರಾಜ ಗಾಂಭೀರ್ಯದಿಂದ ನಡೆದು ಹೋದ ವ್ಯಾಘ್ರನ ಚಿತ್ರಗಳನ್ನು ಈಟಿವಿ ಭಾರತಕ್ಕೆ ಮೂಲಗಳು ನೀಡಿದ್ದು ಪಟ್ಟೆರಾಜನ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.
ಹೆಡಿಯಾಲದ ರಸ್ತೆಯಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ಹುಲಿ ರಿಲ್ಯಾಕ್ಸ್ ಮೂಡಿಗೆ ಜಾರಿತ್ತು ಎಂದು ಸ್ಥಳೀಯ ದನಗಾಹಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಳೆಯಾಗುತ್ತಿರುವುದರಿಂದ ಪ್ರಾಣಿಗಳಿಗೆ ನೀರು ಮತ್ತು ಮೇವಿನ ಕೊರತೆ ಉಂಟಾಗದಿರುವುದು ಒಂದು ಕಡೆಯಾದರೇ ಅರಣ್ಯಕ್ಕೆ ಬೆಂಕಿ ಬೀಳುವ ಸಾಧ್ಯತೆ ಇಲ್ಲದಿರುವುದು ಅರಣ್ಯ ಇಲಾಖೆಗೆ ಸಂತಸದ ವಿಚಾರ ಎಂಬುದು ಸಿಬ್ಬಂದಿ ಅಭಿಮತ.
ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಒಂದು ತಾಸು ಮುಂಚಿತವಾಗಿಯೇ ಸಫಾರಿ ಆರಂಭವಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿದೆ.