ಚಾಮರಾಜನಗರ: ಲಾಕ್ಡೌನ್ನಲ್ಲಿ ಹಲವರು ಉದ್ಯೋಗ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದರೆ, ಈ ನಡುವೆ ಇವರಿಬ್ಬರು ಮಾದರಿ ಬದುಕು ನಡೆಸಲು ಮುಂದಡಿ ಇಟ್ಟಿದ್ದಾರೆ. ಅಷ್ಟಕ್ಕೂ ಇವರು ಸಾಮಾನ್ಯರಲ್ಲ. ಸದಾ ಸಮಾಜದಲ್ಲಿ ಅವಮಾನಿತರಾಗಿ ಬದುಕುತ್ತಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು.
ಹೌದು, ಚಾಮರಾಜನಗರ ಜಿಲ್ಲೆಯ ಯಾನಗಹಳ್ಳಿ ಗ್ರಾಮದ ಮೀನಾ ಹಾಗೂ ರಾಗಿಣಿ ಎಂಬ ಲೈಂಗಿಕ ಅಲ್ಪಸಂಖ್ಯಾತರು ಲಾಕ್ಡೌನ್ ಬಳಿಕ ಭಿಕ್ಷಾಟನೆ ಬಿಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಸ್ವಾವಲಂಬಿ ಜೀವನ ನಡೆಸಲು ಪ್ರಾರಂಭಿಸಿದ್ದಾರೆ.
ಮೀನಾ ಎಂಬುವರು ಕಳೆದ 5 ವರ್ಷದ ಹಿಂದೆ ಮುಂಬೈನಿಂದ ಹಿಂತಿರುಗಿದ್ದು, ರಾಗಿಣಿ 4 ವರ್ಷದ ಹಿಂದೆ ಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಆಗಾಗ್ಗೆ ಇವರು ಭಿಕ್ಷಾಟನೆಗೆ ತೆರಳುತ್ತಿದ್ದರೂ ಲಾಕ್ಡೌನ್ನಲ್ಲಿ ಇವರ ಕಲೆಕ್ಷನ್ ಕಾರ್ಯ ನಿಂತಿತ್ತು. ಬಳಿಕ ಪಾಲಕರ ಬೆಂಬಲದಿಂದ ರೈತರಾಗಲು ಮುಂದಾಗಿದ್ದು, ರಾಗಿಣಿ ಹೈನುಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಮೀನಾ ಅವರ ಬಳಿ ತಂದೆ ಆಸ್ತಿಯಾದ 2.5 ಜಮೀನಿದ್ದು, ಬಿದ್ದ ಮಳೆಗೆ ಭೂಮಿಯನ್ನು ಹದಗೊಳಿಸಿ ಜೋಳ ಬೆಳೆಯಲು ತೀರ್ಮಾನಿಸಿದ್ದಾರೆ. ಸರ್ಕಾರದ ಯೋಜನೆಯಡಿ ಕೊಳವೆ ಬಾವಿಯನ್ನು ಕೊರೆಯಿಸಿ ಕೊಟ್ಟರೆ ಬದುಕಿಗೊಂದು ದಾರಿಯಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ರಾಗಿಣಿ, ಅವರ ತಂದೆ ನಡೆಸುತ್ತಿದ್ದ ಹೈನುಗಾರಿಕೆ ಮುಂದುವರೆಸಿದ್ದು, 8 ಹಸುಗಳನ್ನು ಸಾಕುತ್ತಿದ್ದಾರೆ. ಇದರಲ್ಲಿ ಬರುವ ಆದಾಯದಲ್ಲಿ ಸಂಸಾರದ ನೊಗವನ್ನು ಸಾಗಿಸುತ್ತಿದ್ದು, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ವಿಶೇಷ ಎಂದರೆ ಇವರಿಬ್ಬರೂ ತಮ್ಮ ತಾಯಂದಿರನ್ನು ನೋಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಮನೆಯವರಿಂದ ದೂಷಣೆಗೆ ಒಳಗಾಗಿದ್ದವರು ಇವರು. ಆದರೆ, ಅದೇ ಅವಮಾನಿತ ಮಕ್ಕಳು ಈಗ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದು, ಪಾಲಕರನ್ನು ಸಾಕದಿರುವ ಗಂಡು ಮಕ್ಕಳಿಗೆ ಆದರ್ಶಪ್ರಾಯರಾಗಿದ್ದಾರೆ.
ಸಮಾತಾ ಸೊಸೈಟಿಯ ಅಧ್ಯಕ್ಷರಾದ ದೀಪು ಈಟಿವಿ ಭಾರತದೊಂದಿಗೆ ಮಾತನಾಡಿ, ಜಮೀನು ಇರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಟ್ಟರೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಲಿದೆ. ರಾಗಿಣಿ ಹಾಗೂ ಮೀನಾ ಅವರು ಭಿಕ್ಷಾಟನೆಯನ್ನೇ ನಂಬಿ ಬದುಕುತ್ತಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿಯಾಗಿ ನಿಂತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.