ಚಾಮರಾಜನಗರ: ಸರಿಸುಮಾರು ಒಂದೂವರೆ ವರ್ಷಗಳ ಬಳಿಕ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, 7 ಲಕ್ಷ ರೂ.ಗಳನ್ನು ಭಕ್ತರು ಶಿವನಿಗೆ ಅರ್ಪಿಸಿದ್ದಾರೆ.
ಚಾಮರಾಜನಗರ ತಹಶೀಲ್ದಾರ್ ಬಸವರಾಜ್ ನೇತೃತ್ವದಲ್ಲಿ ಅರ್ಚಕ ರಾಮಕೃಷ್ಣ ಭಾರದ್ವಜ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ಹಾಗೂ ಇನ್ನಿತರರು ಸೇರಿ ಸುಮಾರು 7 ತಾಸು ಹುಂಡಿ ಎಣಿಕೆ ಕಾರ್ಯ ನಡೆಸಿದ್ದು ಒಟ್ಟು 7,61,641 ರೂ. ಹಣ ಸಂಗ್ರಹವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಇದುವರೆಗೆ ಅತಿಹೆಚ್ಚು ಹಣ ಸಂಗ್ರಹವಾಗಿದ್ದು, ದೇವಾಲಯ ಜೀರ್ಣೋದ್ಧಾರ ಹಾಗೂ ರಥೋತ್ಸವ ನಡೆದಿದ್ದರಿಂದ ಇಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ದೇವರಿಗೆ ಬರೆದ ಪತ್ರಗಳು: ಹುಂಡಿ ಎಣಿಕೆ ವೇಳೆ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿವೆ. ವೈಶಿಷ್ಟ್ಯವೆಂದರೆ ಏಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಪತ್ರದಲ್ಲಿ ಬರೆದು ದೇವರ ಹುಂಡಿಗೆ ಹಾಕಿದ್ದು "ದೇವರ ರಾಜ್ಯ ಸಮೀಪಿಸಿದೆ" ಎಂಬ ನಿಗೂಢಾರ್ಥ ವಾಕ್ಯವನ್ನು ಬರೆದಿದ್ದಾನೆ.
ಇನ್ನು, ಯುವಕನೋರ್ವ ತನಗೆ ಹುಡುಗಿ ಕರುಣಿಸು ಪ್ರೀತಿಯ ದೇವರೇ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದಾನೆ. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ: ಚಾಮರಾಜನಗರ: ಯಾತ್ರಿಕರ ಕಾರು ಪಲ್ಟಿಯಾಗಿ ಮಗು ಸಾವು, 6 ಮಂದಿಗೆ ಗಾಯ