ಚಾಮರಾಜನಗರ: ಅರಣ್ಯ ಪ್ರದೇಶದಲ್ಲಿರುವ ಲಂಟನಾ ಕಳೆಗಿಡ ತೆಗೆದು ಹುಲ್ಲುಗಾವಲು ಅಭಿವೃದ್ಧಿ ಪಡಿಸುವ ಅರಣ್ಯ ಇಲಾಖೆ ಯೋಜನೆಗೆ ತೌಕ್ತೆ ಚಂಡಮಾರುತ ಸಾಥ್ ನೀಡಿರುವುದರಿಂದ ಬಿದಿರು ಬಿತ್ತನೆ ಕಾರ್ಯ ಶುರುವಾಗಿದೆ.
ಹೌದು, ತೌಕ್ತೆ ಪರಿಣಾಮ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಟ್ಟು 38 ಹೆಕ್ಟೇರ್ ಪ್ರದೇಶದಲ್ಲಿ 190 ಕೆಜಿ ಬಿದಿರು ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದ್ದು, ಲಂಟನಾ ಕಳೆಯಿಂದ ಮುಕ್ತಿ ಕಾಣಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ.
ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯ, ಜಿ.ಎಸ್.ಬೆಟ್ಟ, ಕುಂದಕೆರೆ, ಮೂಲೆಹೊಳೆ, ಮದ್ದೂರು, ಓಂಕಾರ್, ನುಗು ಸೇರಿದಂತೆ ಒಟ್ಟು 12 ವಲಯಗಳಲ್ಲಿನ ಹಿನ್ನೀರು ಪ್ರದೇಶ, ಕೆರೆಗಳು, ಹಳ್ಳ-ಕೊಳ್ಳ ಸಮೀಪ ಸಿಬ್ಬಂದಿಗಳು ಬಿದಿರು ಬಿತ್ತನೆ ಮಾಡುತ್ತಿದ್ದಾರೆ. ಆನೆಗಳ ಸಂತತಿ ಹೆಚ್ಚಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಜಪಡೆ ಇಷ್ಟದ ಆಹಾರ ಬಿದಿರೇ ಆಗಿದ್ದು ಇತ್ತೀಚಿನ ವರ್ಷಗಳಲ್ಲಿ ಲಂಟನಾ ಹೆಚ್ಚಾಗಿ ಹುಲ್ಲುಗಾವಲು ಕ್ಷೀಣಿಸಿದರೇ, ಸರಿಯಾಗಿ ಮಳೆಯಾಗದ ಪರಿಣಾಮ, ಕಾಡ್ಗಿಚ್ಚಿನಿಂದ ಬಿದಿರಿನ ಪ್ರದೇಶ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಬಂದಿರುವುದರಿಂದ ಸರ್ಕಾರವೇ ಈ ಹುಲ್ಲುಗಾವಲು ಅಭಿವೃದ್ಧಿ ಮತ್ತು ಬಿದಿರು ಬಿತ್ತನೆಗೆ ವಿಶೇಷ ಕಾಳಜಿ ತೋರಿ ಸಾಕಷ್ಟು ಅನುದಾನವನ್ನು ನೀಡುತ್ತಾ ಬಂದಿದೆ.
ಈ ಹಿಂದೆ 1990 ರಲ್ಲಿ ಬಿಳಿಗಿರಿರಂಗನ ಬೆಟ್ಟ ಹಾಗೂ ಬಂಡೀಪುರದಲ್ಲಿ ಏರೋಪ್ಲೇನ್ ಮೂಲಕ ಬಿದಿರು ಬಿತ್ತನೆ ಕಾರ್ಯ ನಡೆದಿತ್ತು. ಆದರೆ, ನಿರೀಕ್ಷಿಸಿದ ಪ್ರಮಾಣದಲ್ಲಿ ಫಲ ನೀಡಲಿಲ್ಲ. ಬಳಿಕದ ವರ್ಷಗಳಲ್ಲಿ ಅರಣ್ಯ ಸಿಬ್ಬಂದಿ ಲಂಟನಾವನ್ನು ಬೇರು ಸಮೇತ ತೆರವುಗೊಳಿಸಿ ಆ ಜಾಗಗಳಲ್ಲಿ ಹುಲ್ಲಿನ ಬೀಜಗಳು, ಬಿದಿರು ಹಾಗೂ ಇನ್ನಿತರೆ ಅರಣ್ಯ ಸಸ್ಯವರ್ಗಗಳನ್ನು ಬಿತ್ತನೆ ಮಾಡುತ್ತಾ ಬಂದಿದ್ದಾರೆ. ಈಗ ತೌಕ್ತೆ ಎಫೆಕ್ಟ್ ನಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಬಿದಿರು ಬಿತ್ತನೆ ಕಾರ್ಯ ಜೋರಾಗಿ ನಡೆಯುತ್ತಿದೆ.